ಬೆಂಗಳೂರು: ಬ್ರಿಟಿಷ್ ಪ್ರಜೆ ಹಾಗೂ ಖ್ಯಾತ ಟ್ಯಾಕ್ಸಿ ಡರ್ಮಿಸ್ಟ್ ಎಡ್ವರ್ಡ್ ಜೋಬರ್ಟ್ ವ್ಯಾನಿಂಗನ್ ಸಾವಿನ ನಿಗೂಢತೆ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಆದಿತ್ಯ ಅಧಿಕಾರಿ ಆಸ್ಪತ್ರೆಯ ನಿರ್ದೇಶಕ ಡಾ ಎನ್.ಚಂದ್ರಶೇಖರ್ (63) ಬಂಧಿತ ಆರೋಪಿ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ತನಿಕೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಪ್ರಸ್ತುತ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಈ ಸಂಬಂಧ ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಎಸ್ಪಿ ಹಾಗೂ ನಜರ್‌ಬಾದ್ ಠಾಣೆ ಇನ್‌ಸ್ಪೆಕ್ಟರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಎರಡು ಮರಣ ಪತ್ರ: ವ್ಯಾನಿಂಗನ್ ಸಾವಿನ ಸಂಬಂಧ ಎರಡು ಮರಣ ಪತ್ರಗಳನ್ನು ನೀಡಲಾಗಿದ್ದು, ಎಡ್ವರ್ಡ್ ಜೋಬರ್ಟ್ ವ್ಯಾನಿಂಗನ್ 2013ರ ಮಾರ್ಚ್ 11ರ ಬೆಳಗಿನ ಜಾವ 5.30ಕ್ಕೆ ಮೃತಪಟ್ಟಿರುವುದಾಗಿ ಮೊದಲ ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಎರಡನೇ ಪತ್ರದಲ್ಲಿ ಮಾ.10ರ ಮಧ್ಯರಾತ್ರಿ 12.30ಕ್ಕೆ ಮೃತಪಟ್ಟಿದ್ದಾರೆ ಎಂದು ನಮೂದಾಗಿದೆ. ಅಲ್ಲದೆ ವ್ಯಾನಿಂಗನ್‌ಗೆ ನೀಡಿರುವ ಚಿಕಿತ್ಸೆ ಕುರಿತು ಎರಡೂ ಪತ್ರದಲ್ಲೂ ವಿಭಿನ್ನ ವಿವರ ದಾಖಲಾಗಿದೆ. ಜತೆಗೆ ಮೈಕೆಲ್ ವ್ಯಾನಿಂಗನ್‌ರ ದತ್ತುಪುತ್ರ ಎಂದು ಮರಣಪತ್ರದಲ್ಲಿ ನಮೂದಿಸಲಾಗಿದೆ.
ಆಸ್ತಿಗಾಗಿ ಕುತಂತ್ರ: ಮರಣದ ಸಮಯವನ್ನು ವ್ಯತ್ಯಾಸ ಮಾಡುವ ಮೂಲಕ ಆಸ್ತಿ ಪತ್ರಗಳ ವಿಲ್ ಅನ್ನು ತಮ್ಮ ಹೆಸರಿಗೇ ಮಾಡಿಕೊಳ್ಳಲು ಮೈಕೆಲ್‌ಗೆ ಡಾ.ಎನ್.ಚಂದ್ರಶೇಖರ್ ನೆರವಾಗಿದ್ದರು. ಜತೆಗೆ ಚಿಕಿತ್ಸೆ ನೀಡಿದ ವರದಿಯನ್ನು ಸಂಪೂರ್ಣವಾಗಿ ತಿದ್ದಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ಪತ್ತೆಯಾಗಿದೆ. ಆದರೆ, ಪ್ರಕರಣ ಪ್ರಮುಖ ಆರೋಪಿ ಮೈಕೆಲ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ದತ್ತು ಪುತ್ರ ಎಂದಿದ್ದ: ನೂರು ವರ್ಷದ ವೃದ್ಧ ವ್ಯಾನಿಂಗನ್ ಅವರಿಗೆ ತಾನೇ ದತ್ತು ಪುತ್ರ ಎಂದು ಮೈಕೆಲ್ ಹೇಳಿಕೊಂಡಿದ್ದ. ದತ್ತುಪುತ್ರ ಎನ್ನುವ ರೀತಿ ಸುಳ್ಳು ದಾಖಲೆ ಸೃಷ್ಟಿಸಿಕೊಂಡಿದ್ದ. ಈ ಮೂಲಕಲೇ ವ್ಯಾನಿಂಗನ್‌ನ 200 ಕೋಟಿ ರೂ. ಆಸ್ತಿಯನ್ನು ಲಪಟಾಯಿಸಿದ್ದ. ಅಷ್ಟೇ ಅಲ್ಲದೆ, ಆಸ್ತಿಗಾಗಿ ವ್ಯಾನಿಂಗನ್ ಸಾಯುವವರೆಗೂ ಶೆಡ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು ಎಂದು ಅವರ ಹತ್ತಿರದ ಸಂಬಂಧಿ ಟೆಲ್ಲಿ ಗಿಫರ್ಡ್ ದೂರು ದಾಖಲಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಮೈಕೆಲ್ ಹೈಕೋರ್ಟ್ ಮೆಟ್ಟಿಲೇರಿದ್ದಲ್ಲದೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆ ತಂದಿದ್ದ. ನಂತರ ಟೆಲ್ಲಿ ಗಿಫರ್ಡ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರ ಪರಿಣಾಮ ಪ್ರಕರಣದ ತನಿಖೆಗೆ ಡಿಜಿಪಿ ಮಟ್ಟದ ಅಧಿಕಾರಿಯನ್ನು ನೇಮಿಸಿ 60 ದಿನದೊಳಗೆ ತನಿಖೆ ವರದಿ ನೀಡುವಂತೆ 2017ರ ಆ.1 ರಂದು ಸೂಚನೆ ನೀಡಿತ್ತು. ಅದರಂತೆ ತನಿಖೆ ನಡೆಸಿದ ಸಿಐಡಿ ಡಿಜಿ ಕಿಶೋರ್ ಚಂದ್ರ ಮತ್ತು ತಂಡ ಪ್ರಕರಣ ಕುರಿತು ಮೊದಲ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಸ್ತಿಗಾಗಿ ನಡೆದಿತ್ತೇ ಕೊಲೆ?: ವ್ಯಾನಿಂಗನ್ ಬ್ರಿಟಿಷ್ ಪ್ರಜೆ ಆಗಿದ್ದು, ಬ್ರಿಟಿಷ್ ಆಳ್ವಿಕೆ ಸಂದರ್ಭದಲ್ಲಿ ರಾಜ್ಯಕ್ಕೆ ಬಂದವರು ಎನ್ನಲಾಗಿದೆ. ಮೈಸೂರಿನ ಬಿಸಲ್‌ವುಂಟ್ ಮನೆಯಲ್ಲಿ ನೆಲೆಸಿದ್ದ ಅವರು, ಅವಿವಾಹಿತರಾಗಿದ್ದರು. ಈ ಮನೆಯ ಹಿಂದೆ ಐದು ಎಕರೆ ಖಾಲಿ ನಿವೇಶನ ಇತ್ತು. ಇದೇ ವೇಳೆ ಮೈಸೂರಿನ ರೇಸ್ ಕೋರ್ಸ್‌ನಲ್ಲಿ ಕುದುರೆ ತರಬೇತುದಾರನಾಗಿರುವ ಮೈಕಲ್ ಪ್ರಾಯ್ಡ ಈಶ್ವರ್, ವ್ಯಾನಿಂಗನ್ ಅವರನ್ನು ಪರಿಚಯ ಮಾಡಿಕೊಂಡು ಆತ್ಮೀಯತೆ ಬೆಳೆಸಿಕೊಂಡಿದ್ದ.
ಈ ಮಧ್ಯೆ ತಮ್ಮ ಮನೆಯ ಹಿಂದಿನ ಖಾಲಿ ನಿವೇಶನವನ್ನು ವ್ಯಾನಿಂಗನ್ ಪ್ರಸ್ಟೀಜ್ ಬಿಲ್ಡರ್ ಸಂಸ್ಥೆಗೆ ಮಾರಾಟ ಮಾಡಿದ್ದರು. ಆ ಜಾಗ ಮಾರಾಟವಾಗಿದ್ದು 20 ಕೋಟಿ ರೂ.ಗೆ ಆದರೂ ಮಾರಾಟ ಮಾಡಿ ಬಂದ ಹಣದಲ್ಲಿ ವ್ಯಾನಿಂಗನ್‌ಗೆ ಸಿಕ್ಕಿದ್ದು 3 ಕೋಟಿ ಮಾತ್ರ ಎನ್ನುವ ಆರೋಪವೂ ಕೇಳಿ ಬಂದಿತ್ತು.
ಒಟ್ಟು ವ್ಯಾನಿಂಗನ್ ಅವರ ಬಳಿ ಇದ್ದ ಸುಮಾರು 200 ಕೋಟಿ ರೂ ಮೌಲ್ಯದ ಆಸ್ತಿ ಲಪಟಾಯಿಸಲು ಮೈಕೆಲ್ ಸುಂಚು ರೂಪಿಸಿ ಅವರನ್ನು ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
-ಉದಯವಾಣಿ
Comments are closed.