ಕರ್ನಾಟಕ

ಮಹಿಳೆಯ ಫೋಟೋ ಮಾರ್ಫಿಂಗ್‌ ಮಾಡಿದಾತನ ಸೆರೆ

Pinterest LinkedIn Tumblr


ಬೆಂಗಳೂರು: ಜಾಹೀರಾತು ಕಂಪನಿಯಲ್ಲಿ ಮಾಡೆಲ್‌ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರ ಫೋಟೋ ಪಡೆದು ಅದನ್ನು ಅಶ್ಲೀಲಗೊಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ನಾರಾಯಣ ಪ್ರಭು (33) ಬಂಧಿತ. ಆರೋಪಿ ಮತ್ತು ಮಹಿಳೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸುಂದರವಾಗಿದ್ದ ಮಹಿಳೆಯ ಫೋಟೋ ಪಡೆದ ಆರೋಪಿ, ಅವರ ಮುಖಕ್ಕೆ ಬೇರೊಬ್ಬ ಮಹಿಳೆಯ ನಗ್ನ ದೇಹದ ಚಿತ್ರ ಜೋಡಿಸಿದ್ದ.

ನಂತರ ಅದನ್ನು ಸಹೋದ್ಯೋಗಿ ಮಹಿಳೆಗೆ ತೋರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ. ಹಣ ನೀಡದಿದ್ದರೆ ಮಾರ್ಫಿಂಗ್‌ ಮಾಡಿದ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಅಲ್ಲದೆ, ಮಹಿಳೆಯನ್ನು ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಾರಾಯಣಪ್ರಭು ನಾಲ್ಕು ತಿಂಗಳಿಂದ ಇನೆ#ಂಟ್ರಿ ರಸ್ತೆಯಲ್ಲಿರುವ ಫ್ರಾಂಕಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್ ಏರೋಸೆಸ್‌ ಆಫ್ ಟ್ರೈನಿಂಗ್‌ ಕಂಪನಿಯ ಜಾಹಿರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಂಪೆನಿಯಲ್ಲಿ ಅಸ್ಟಿಟೆಂಟ್‌ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯ ಸ್ನೇಹ ಸಂಪಾದಿಸಿದ್ದ.

ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿತ್ತು. ಈ ನಡುವೆ ಎಲ್ಲಾದರೂ 3 ಲಕ್ಷ ರೂ. ಸಾಲ ಕೊಡಿಸುವಂತೆ ಮಹಿಳೆ ಆರೋಪಿಯನ್ನು ಕೇಳಿದ್ದರು. ಈ ವೇಳೆ ಆರೋಪಿ, “ನೀವೇಕೆ ಬೇರೆಯವರ ಬಳಿ ಹಣ ಕೇಳುತ್ತೀರಿ. ನೀವು ಸುಂದರವಾಗಿದ್ದೀರಿ, ಜಾಹಿರಾತು ಕಂಪನಿಗಳಲ್ಲಿ ಪ್ರತಿಷ್ಠಿತ ಬ್ರಾಂಡ್‌ ವಸ್ತುಗಳ ಜಾಹಿರಾತುಗಳಲ್ಲಿ ನಟನೆಗೆ ಅವಕಾಶ ಕೊಡಿಸುತ್ತೇನೆ. ಈ ಮೂಲಕ ನೀವು ಹಣ ಸಂಪಾದಿಸಬಹುದು,’ ಎಂದು ಹೇಳಿದ್ದ. ಆರೋಪಿಯ ಮಾತು ನಂಬಿದ ಮಹಿಳೆ, ಆರೋಪಿಗೆ ತಮ್ಮ ಹಲವು ಫೋಟೋಗಳನ್ನು ನೀಡಿದ್ದರು.

3 ಲಕ್ಷ ರೂ.ಗೆ ಬೇಡಿಕೆ
ಮಹಿಳೆಯಿಂದ ಫೋಟೋ ಪಡೆದ ಆರೋಪಿ, ಇತ್ತೀಚೆಗೆ ಏಕಾಏಕಿ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆಗಾಗ ಮಹಿಳೆಗೆ ಕರೆ ಮಾಡಿ, “3 ಲಕ್ಷ ರೂ. ಹಣ ಕೊಡು. ಇಲ್ಲದಿದ್ದರೆ ನಿನ್ನ ಫೋಟೋಗಳನ್ನು ಮಾಫ್ì ಮಾಡಿ (ನಗ್ನ ಫೋಟೋಗಳಿಗೆ ಮುಖ ಅಂಟಿಸುವುದು) ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ. ಈ ಫೋಟೋಗಳನ್ನು ನಿನ್ನ ಪತಿಯ ವಾಟ್ಸ್‌ಆ್ಯಪ್‌ಗೂ ಕಳಿಸುತ್ತೇನೆ,’ ಎಂದು ಬೆದರಿಸುತ್ತಿದ್ದ.

ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮಹಿಳೆಯನ್ನು ಒತ್ತಾಯಿಸಿದ್ದ ಆರೋಪಿ, ಆಕೆಯ ಪತಿಗೆ ಒಮ್ಮೆ ಕರೆ ಕೂಡ ಮಾಡಿದ್ದ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದರು. ಆದರೂ ಬೆದರಿಕೆ ಹಾಕುವುದನ್ನು ನಿಲ್ಲಿಸದ ಆರೋಪಿ, ಮಾಫ್ì ಮಾಡಿದ ಕೆಲ ಚಿತ್ರಗಳನ್ನು ಮಹಿಳೆಯಗೆ ವಾಟ್ಸ್‌ಆ್ಯಪ್‌ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಕೃತ್ಯದಿಂದ ಗಾಬರಿಗೊಂಡ ಮಹಿಳೆ, ಪತಿಗೆ ವಿಷಯ ತಿಳಿಸಿದ್ದರು. ನಂತರ ಅ.11ರಂದು ದಂಪತಿ ನಾರಾಯಣಪ್ರಭು ವಿರುದ್ಧ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ್ವಯ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ, ಕೆಲಸ ತೊರೆದ ಬಳಿಕ ಜೀವನ ನಿರ್ವಹಣೆಗೆ ಹಣ ವಿಲ್ಲದೆ ಈ ಕೃತ್ಯಕ್ಕೆ ಇಳಿದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.