ಕರ್ನಾಟಕ

ಅಧಿಕಾರದಲ್ಲಿದ್ದಾಗ ಬಿಜೆಪಿ ಟಿಪ್ಪು ಜಯಂತಿ ಆಚರಿಸಿದ್ದೇಕೆ?: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ತಾವು ಅಧಿಕಾರದಲ್ಲಿದ್ದಾಗ ಟಿಪ್ಪು ವೇಷಧಾರಿಗಳಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದ ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಆರ್‌.ಅಶೋಕ್‌ ಮೊದಲಾದವರು ಈಗ ವಿರೋಧ ಮಾಡುತ್ತಿರುವುದೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ”ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರ ಎರಡು ನಾಲಗೆಯನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಅಲ್ಲಾಹುವಿನ ಮೇಲೆ ಆಣೆ ಮಾಡಿದ್ದ ಯಡಿಯೂರಪ್ಪನವರು, ನಾನು ಮತ್ತೆ ಬಿಜೆಪಿ ಸೇರುವುದಿಲ್ಲ ಎಂದು ಕೂಗಿದ್ದರು. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪನವರ ಮಾತಿಗೆ ಏನಾದರೂ ಕಿಮ್ಮತ್ತಿದೆಯೇ,” ಎಂದು ವ್ಯಂಗ್ಯವಾಡಿದರು.

”ಮುಖ್ಯಮಂತ್ರಿಯಾಗಿ ಜಗದೀಶ್‌ ಶೆಟ್ಟರ್‌, ಉಪ ಮುಖ್ಯಮಂತ್ರಿಯಾಗಿ ಅಶೋಕ್‌ ಟಿಪ್ಪು ವೇಷಧಾರಿಗಳಾಗಿ ಜಯಂತಿ ಆಚರಿಸಿದ್ದಷ್ಟೇ ಅಲ್ಲ ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದು ಶೆಟ್ಟರ್‌ ಅವರು ಟಿಪ್ಪು ವನ್ನು ಹಾಡಿ ಹೊಗಳಿದ್ದರು.ಆದರೆ ಈಗ ರಾಜಕೀಯ ಪ್ರೇರಿತರಾಗಿ ವಿರೋಧ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಿಂದು- ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.

”ಟಿಪ್ಪು ಜಯಂತಿ ನಡೆಸುವುದು ಸರಕಾರದ ತೀರ್ಮಾನ. ಅದನ್ನು ವಿರೋಧಿಸುವವರಿಗೆ ಸಂವಿಧಾನ ಗೊತ್ತಿಲ್ಲ.ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ವಿವಾದ ಸ್ವರೂಪ ನೀಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಲೆಕ್ಕಾಚಾರ. ದೇವನಹಳ್ಳಿಯಲ್ಲಿ ಜನಿಸಿದ ಟಿಪ್ಪು ಕನ್ನಡಿಗರಲ್ಲವೇ ? ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿಲ್ಲವೇ? ಮೂರನೇ ಯುದ್ಧದಲ್ಲಿ ಬ್ರಿಟಿಷರಿಗೆ ಯುದ್ಧ ವೆಚ್ಚ ನೀಡಲಾಗದೆ ತನ್ನ ಮಕ್ಕಳನ್ನೇ ಅಡ ಇಟ್ಟದ್ದ. ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದು ಸುಳ್ಳೇ ? ಯಾರೇ ಆಗಲಿ, ಇತಿಹಾಸ ತಿರುಚಬಾರದು,” ಎಂದು ಅಭಿಪ್ರಾಯಪಟ್ಟರು.

Comments are closed.