ಕರ್ನಾಟಕ

ರಾಜ್ಯದ ಎಲ್ಲ ಮಾಧ್ಯಮ ಶಾಲೆಗಳಲ್ಲೂ 1ರಿಂದ 10ನೇ ತರಗತಿವರೆಗೆ ಕನ್ನಡ ಕಲಿಸಬೇಕು

Pinterest LinkedIn Tumblr


ಬೆಂಗಳೂರು: ರಾಜ್ಯದ ಎಲ್ಲ ಮಾಧ್ಯಮ ಶಾಲೆಗಳಲ್ಲೂ 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಆದರೆ, ಈ ಆದೇಶವನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಖಾಸಗಿ ಶಾಲೆಗಳು ರಾಜ್ಯ ಸರಕಾರಕ್ಕೆ ಸಡ್ಡು ಹೊಡೆದಿವೆ.

ರಾಜ್ಯದ ಯಾವಯಾವ ಶಾಲೆಗಳಲ್ಲಿ 2015-16ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ಪ್ರಾರಂಭಿಸಿರುವುದಿಲ್ಲವೋ ಅಂತಹ ಶಾಲೆಗಳಲ್ಲಿ 2017-18ನೇ ಸಾಲಿನಿಂದ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಶಿಕ್ಷಣ ಇಲಾಖೆಯ (ಪ್ರಾಥಮಿಕ) ಸರಕಾರದ ಅಧೀನ ಕಾರ್ಯದರ್ಶಿ ವಿ. ನಾಗೇಶ ರಾವ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಅ.21ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ.

2017-18ರಲ್ಲಿ 1ನೇ ತರಗತಿ, 2018-19ರಲ್ಲಿ 1 ಮತ್ತು 2ನೇ ತರಗತಿ, 2019-20ರಲ್ಲಿ 1, 2 ಮತ್ತು 3ನೇ ತರಗತಿ, 2020-21ರಲ್ಲಿ 1, 2, 3 ಮತ್ತು 4ನೇ ತರಗತಿ, 2021-22ರಲ್ಲಿ 1ರಿಂದ 5ನೇ ತರಗತಿ, 2022-23ರಲ್ಲಿ 1ರಿಂದ 6ನೇ ತರಗತಿ, 2023-24ರಲ್ಲಿ 1ರಿಂದ 7ನೇ ತರಗತಿ, 2024-25ರಲ್ಲಿ 1ರಿಂದ 8ನೇ ತರಗತಿ, 2025-26ರಲ್ಲಿ 1ರಿಂದ 9ನೇ ತರಗತಿ ಹಾಗೂ 2026-27ರ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿವರೆಗೆ ಹಂತಹಂತವಾಗಿ ಕನ್ನಡ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸದ ಶಾಲೆಗಳ ವಿರುದ್ಧ ಬರುವ ದೂರುಗಳನ್ನು ಸಕ್ಷಮ ಪ್ರಾಧಿಕಾರಿಯು ವಿಚಾರಣೆ ನಡೆಸಲಿದ್ದಾರೆ. ಈ ಅಧಿಕಾರಿ ನಿರ್ದಿಷ್ಟ ಶಾಲೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನೋಟಿಸ್‌ ಜಾರಿಗೊಳಿಸುವ ಮೂಲಕ ಕ್ರಮ ಜರುಗಿಸುವ ಅಧಿಕಾರ ಹೊಂದಿದ್ದಾರೆ.

ಕನ್ನಡ ಭಾಷೆ ಬೋಧಿಸದ ಶಾಲೆಗಳಿಗೆ ನೋಟಿಸ್‌ ನೀಡಿದ 30 ದಿನಗಳೊಳಗೆ ಈ ಅಧಿಕಾರಿ ವಿಚಾರಣೆ ನಡೆಸಬೇಕು. ಒಂದು ವೇಳೆ ಕನ್ನಡ ಭಾಷಾ ಕಲಿಕೆ ಅಧಿನಿಧಿಯಮ-2015 ಉಲ್ಲಂಘಿಸಿದ ಆರೋಪ ಸಾಬೀತಾದರೆ ಕ್ರಮ ಜರುಗಿಸುವ ಅಧಿಕಾರವನ್ನೂ ಈ ಅಧಿಕಾರಿಗೆ ನೀಡಲಾಗಿದೆ.

ಕರ್ನಾಟಕ ಶಿಕ್ಷಣ ಅಧಿನಿಯಮ-1983ರ ಅಧಿನಿಯಮ 128ನೇ ಪ್ರಕರಣದಲ್ಲಿ ತಿಳಿಸಿದಂತೆ ಈ ಶಾಲೆಗಳಿಗೆ ದಂಡ ವಿಧಿಸಲು ಅವಕಾಶವಿದೆ.

Comments are closed.