ಕರ್ನಾಟಕ

ಹೃದಯ ಕಸಿಗೆ ಒಳಗಾದ ರಾಜ್ಯದ ಮೊದಲ ಮಹಿಳೆಗೆ 2ನೇ ಬಾರಿ ಹೃದಯ ಕಸಿ

Pinterest LinkedIn Tumblr


ಬೆಂಗಳೂರು: ಹೃದಯ ಕಸಿಗೆ ಒಳಗಾಗಿರುವ ರಾಜ್ಯದ ಮೊದಲ ಮಹಿಳೆ ರೀನಾ ರಾಜ್‌ ಅವರಿಗೆ ಈಗ ಎರಡನೇ ಬಾರಿಗೆ ಹೃದಯ ಕಸಿ ಮಾಡಲಾಗಿದೆ.

ಚೆನ್ನೈನ ಫ್ರಂಟೈರ್‌ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ ರೀನಾ ಇತ್ತೀಚೆಗೆ ಹೃದಯ ಕಸಿಗೆ ಒಳಗಾಗಿದ್ದಾರೆ. ಇಪ್ಪತ್ತೊಂದು ವರ್ಷದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ರೀನಾ ಅವರಿಗೆ ಜೋಡಿಸುವುದಕ್ಕೆ ತಮಿಳುನಾಡಿನ ಅಂಗಾಗ ಕಸಿ ಪ್ರಾಧಿಕಾರ ಅನುಮೋದಿಸಿದೆ. ಇದೇ ಆಸ್ಪತ್ರೆಯಲ್ಲಿ ರೀನಾ ಅವರಿಗೆ 2009ರಲ್ಲಿ ಮೊದಲ ಬಾರಿಗೆ ಹೃದಯ ಕಸಿ ಮಾಡಲಾಗಿತ್ತು.

ರೀನಾ ಅವರು ಹೃದಯದ ಅಪಧಮನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹೃದಯ ಕಸಿಯಿಂದ ಮಾತ್ರವೇ ಪರಿಹಾರ ಸಾಧ್ಯ. ರೀನಾ ಸೆ.17ರಂದು ಚೆನ್ನೈಗೆ ಪ್ರಯಾಣಿಸಿದ್ದು, ತಲುಪಿದ ತಕ್ಷಣ ಅವರಿಗೆ ಹೃದಯಾಘಾತವಾಗಿದೆ. ತಮಿಳುನಾಡಿನ ಅಂಗಾಂಗ ಕಸಿ ಪ್ರಾಧಿಕಾರದಡಿ ಅವರ ಹೆಸರು ನೋಂದಾಯಿಸಲಾಯಿತು. ಸೆ. 22ರಂದು ಅವರಿಗೆ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಹೃದಯವನ್ನು ಜೋಡಿಸಲಾಯಿತು.

‘ಇದು ನನಗೆ ಎರಡನೇ ಜೀವದಾನ. ಕೆಲವು ದಿನ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಎಚ್ಚರವಾದಾಗ ಮತ್ತೆ ನನಗೆ ಹೃದಯ ಕಸಿ ಮಾಡಬೇಕಿದೆ ಎಂದರು. ಮೂವರು ದಾನಿಗಳ ಹೃದಯ ಹೊಂದಿಕೆ ಆಗಲಿಲ್ಲ,’ಎಂದು ಹೃದಯ ಕಸಿಗೆ ಒಳಗಾಗಿ ಬೆಂಗಳೂರಿಗೆ ಮರಳಿರುವ ರೀನಾ ಹೇಳಿದ್ದಾರೆ. ಜೂನ್‌ನಲ್ಲಿ ಸ್ಪೇನ್‌ನಲ್ಲಿ ನಡೆದ ‘ವರ್ಲ್ಡ್‌ ಟ್ರಾನ್ಸ್‌ಪ್ಲಾಂಟ್‌ ಗೇಮ್ಸ್‌ ಫೆಡರೇಷನ್‌’ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಕ್ರೀಡಾಪಟು.

Comments are closed.