ಕರ್ನಾಟಕ

ಕುರ್ಚಿ ಉಳಿವಿಗೆ ಹೈಕಮಾಂಡ್‌ಗೆ 1 ಸಾವಿರ ಕೋಟಿ ಸಂದಾಯ ಮಾಡಿದ ಸಿದ್ದರಾಮಯ್ಯ: ಯಡಿಯೂರಪ್ಪ

Pinterest LinkedIn Tumblr

ಬಾಗಲಕೋಟೆ: ‘ಮುಖ್ಯಂಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಅವರ ಆಪ್ತರೂ ಆಗಿರುವ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮೂಲಕ ಕಾಂಗ್ರೆಸ್‌ನ ದೆಹಲಿಯ ಕೆಲವು ನಾಯಕರಿಗೆ ₹1 ಸಾವಿರ ಕೋಟಿ ಸಂದಾಯ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಗಂಭೀರ ಆರೋಪ ಮಾಡಿದರು.

ಬಾಗಲಕೋಟೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಹೊಸ ಬಾಂಬ್ ಸಿಡಿಸಿದರು.

‘ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಡೈರಿಯಲ್ಲಿನ ಮಾಹಿತಿ ಆಧರಿಸಿ ಗೋವಿಂದರಾಜು ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

‘ದೆಹಲಿಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರಿಗೆ ರಾಜ್ಯದ ಕಾಂಗ್ರೆಸ್ ಮುಖಂಡರಿಂದ ₹1,000 ಕೋಟಿಗೂ ಅಧಿಕ ದೇಣಿಗೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜ ಅವರ ಕೈಯಿಂದ ಕೇಂದ್ರದ ನಾಯಕರಿಗೆ ಹಣ ರವಾನಿಸಿದ್ದಾರೆ. ಈ ಬಗ್ಗೆ ಡೈರಿಯಲ್ಲಿ ಉಲ್ಲೇಖ ಮಾಡಲಾಗಿದೆ. ದಾಖಲೆ ಸಹಿತ ಬಿಡುಗಡೆ ಮಾಡಲು ಸಿದ್ಧ’ ಎಂದ ಯಡಿಯೂರಪ್ಪ ಅವರು, ‘ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಸತ್ಯ ಬಾಯ್ಬಿಡಬೇಕು ಎಂದು’ ಸವಾಲು ಹಾಕಿದರು.

‘ಕುಷ್ಟಗಿ ವಿಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಮಾಡದೇ ₹43ಕೋಟಿ ತಿಂದಿದ್ದಾರೆ. ಆರೋಪ ಸಾಬೀತಾದರೂ ಹಣ ವಸೂಲಿ ಮಾಡಲಾರದೇ ಸಿಎಂ ಕಣ್ಮುಚ್ಚಿ ಕೈಕಟ್ಟಿ ಕುಳಿತಿದ್ದಾರೆ. ಈ ಎರಡೂ ಆರೋಪಗಳನ್ನು ದಾಖಲೆ ಸಾಬೀತು ಮಾಡಲು ಸಿದ್ಧ’ ಎಂದರು.

Comments are closed.