ಮನೋರಂಜನೆ

ಮೇಲುಕೋಟೆ ಮಂಜ ವಿಮರ್ಶೆ

Pinterest LinkedIn Tumblr

ಗಣೇಶ ವೈದ್ಯ

ಚಿತ್ರ: ಮೇಲುಕೋಟೆ ಮಂಜ
ನಿರ್ಮಾಪಕ: ಕೃಷ್ಣ ಆರ್.
ನಿರ್ದೇಶಕ: ಜಗ್ಗೇಶ್
ತಾರಾಗಣ: ಜಗ್ಗೇಶ್, ಐಂದ್ರಿತಾ ರೇ, ಶ್ರೀನಿವಾಸ ಪ್ರಭು, ರಂಗಾಯಣ ರಘು

ಜಗ್ಗೇಶ್ ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ ‘ಮೇಲುಕೋಟೆ ಮಂಜ’. ಜಗ್ಗೇಶ್ ನಿರ್ಣಾಯಕರಾಗಿರುವ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋದ ಮೆಗಾ ಎಪಿಸೋಡ್ ರೀತಿಯಲ್ಲಿದೆ ಸಿನಿಮಾ. ಅಲ್ಲಿ ಸ್ಪರ್ಧಿಗಳು ಒಂದು ಥೀಮ್ ಇಟ್ಟುಕೊಂಡು ಹತ್ತು ನಿಮಿಷಗಳ ರೂಪಕವನ್ನು ಪ್ರದರ್ಶಿಸಿದರೆ ಇಲ್ಲಿ ಜಗ್ಗೇಶ್ – ಸಾಲ ಮಾಡುವ, ತೀರಿಸದೆ ಓಡಾಡಿಕೊಂಡಿರುವ ವ್ಯಕ್ತಿಯ ಕಥೆ ಇಟ್ಟುಕೊಂಡು ಎರಡೂಕಾಲು ಗಂಟೆ ಎಳೆದಾಡಿದ್ದಾರೆ. ಕಥೆಯನ್ನು ಹಾಸ್ಯದ ಲೇಪನದಲ್ಲಿ ಕಟ್ಟಿಕೊಡುವುದು ಅವರ ಪ್ರಯತ್ನ.

ಮಂಜನ (ಜಗ್ಗೇಶ್) ತಂದೆ ಶಿಕ್ಷಕ. ಅವರು ಸ್ವಾಭಿಮಾನ, ಪ್ರಾಮಾಣಿಕತೆಗೆ ಅನ್ವರ್ಥಕ. ಆದರೆ ಎದೆಮಟ್ಟಕ್ಕೆ ಬೆಳೆದು ನಿಂತ ಮಂಜ ಮಾತ್ರ ಬಿಜಿನೆಸ್ ಮಾಡುತ್ತೇನೆ ಎನ್ನುತ್ತ ತಂದೆಯ ಹಣಕ್ಕೆ ಒಂದು ದಾರಿ ತೋರಿಸಿದ್ದಾಗಿದೆ. ತಂದೆ ಇನ್ನು ಹಣ ಕೊಡುವುದಿಲ್ಲ ಎಂದಾಗ ಊರಲ್ಲಿರುವ ಬಡ್ಡಿ ವ್ಯವಹಾರಸ್ಥರಿಗೆಲ್ಲ ‘ಡಿಸೈನ್ ಡಿಸೈನ್’ ಕಣ್ಣೀರ ಕಥೆ ಕಟ್ಟಿ ಸಾಲ ಮಾಡುತ್ತಾನೆ. ಆ ಕಥೆಗೆ ಅವರು ಮರುಳಾಗುತ್ತಾರೆ. ಸಾಲವನ್ನು ತೀರಿಸದೆ ಚಳ್ಳೆಹಣ್ಣು ತಿನ್ನಿಸುತ್ತ ತಿರುಗಾಡಿಕೊಂಡಿರುವ ಮಂಜನಿಗೆ ಯಾರೇ ಬುದ್ಧಿವಾದ ಹೇಳಿದರೂ ಅದು ಅಪಥ್ಯ. ಹೆತ್ತಮ್ಮನಿಗೆ ಮಾತ್ರ ಹೆಗ್ಗಣವೂ ಮುದ್ದು.

ತಾನು ಪಡುವ ಕಷ್ಟ ನೋಡಲಾಗದ ತಂದೆ ಮನೆ ಅಡವಿಟ್ಟು ಸಾಲ ತೀರಿಸಿದಾಕ್ಷಣ ಮಂಜನಲ್ಲಿ ಅದುವರೆಗೆ ಇಲ್ಲದ ಜವಾಬ್ದಾರಿ ಜಾಗೃತವಾಗಿಬಿಡುತ್ತದೆ, ಬದಲಾವಣೆ ಆಗುತ್ತದೆ. ಬ್ಯಾಂಕೊಂದರಲ್ಲಿ ಸಾಲ ವಸೂಲಿಗಾರನ ಕೆಲಸವೂ ಸಿಗುತ್ತದೆ. ಎಲ್ಲರನ್ನೂ ಮಾತಿನಿಂದ ಮರುಳು ಮಾಡಿ ಸಾಲ ಪಡೆದುಕೊಳ್ಳುವಷ್ಟೇ ಸುಲಭವಾಗಿ ಸಾಲ ವಸೂಲಿಯನ್ನೂ ಮಾಡುತ್ತಾನೆ.

ಸ್ವಾಭಿಮಾನಿ ತಂದೆಯ ಮಗ ಹೇಗೆ ಸಾಲಗಾರನಾದ, ಆತ ಸಾಲ ಮಾಡಿದ ಹಣವೆಲ್ಲ ಹೇಗೆ ಖರ್ಚಾಗುತ್ತವೆ, ಏನೂ ಅಲ್ಲದ ಪುಡಿ ರೌಡಿಗೆ ಏಕೆ ಸಮಾಜ, ಸರ್ಕಾರ ಹೆದರುತ್ತದೆ– ಇವೆಲ್ಲ ತರ್ಕಾತೀತ ಪ್ರಶ್ನೆ ಕೇಳಿದರೆ ಉತ್ತರವಿಲ್ಲ. ಸಾಲ ಕೊಡಲು ಬಡ್ಡಿ ವ್ಯಾಪಾರಿಗಳಿಗೆ ಒಂದು ರೀತಿ–ನೀತಿಯಿಲ್ಲ, ಅದನ್ನು ಹಿಂಪಡೆಯಲು ಇರಬೇಕಾದ ‘ವೃತ್ತಿಪರತೆ’ಯೂ ಇಲ್ಲ. ಪೊಲೀಸರೂ ರೌಡಿಗಳ ಭಾಷೆಯಲ್ಲೇ ಮಾತನಾಡುತ್ತಾರೆ. ನಿರ್ದೇಶಕರ ಅವಶ್ಯಕ್ಕೆ ತಕ್ಕಂತೆ ಬರುವುದಷ್ಟೇ ಈ ಪಾತ್ರಗಳ ಕೆಲಸ.

ಸಿನಿಮಾವನ್ನು ಆವರಿಸಿಕೊಂಡಿರುವ ಜಗ್ಗೇಶ್ ಸಂಭಾಷಣೆ, ದೇಹಭಾಷೆಯಲ್ಲಿ ನಗಿಸುತ್ತಾರೆ. ಬೇರೆ ಪಾತ್ರಗಳ ಅಭಿನಯ, ಸಂಭಾಷಣೆಗಳು ಕೆಲವು ಕಡೆ ಅತಿರೇಕವೂ ಆಗಿದೆ (ಸಂಭಾಷಣೆ ಜಗ್ಗೇಶ್). ಗಿರಿಧರ್ ದಿವಾನ್ ಸಂಗೀತದಲ್ಲಿ ವಿಶೇಷ ಏನಿಲ್ಲದಿದ್ದರೂ ಹಿನ್ನೆಲೆ ಸಂಗೀತ ಕಠೋರವಾಗಿದೆ. ಐಂದ್ರಿತಾ ರೇ ಅವರಿಗೆ ತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶವೇ ಕಡಿಮೆ.

Comments are closed.