ಮನೋರಂಜನೆ

ಅಮರಾವತಿ ಚಿತ್ರ ವಿಮರ್ಶೆ

Pinterest LinkedIn Tumblr

ರಘುನಾಥ ಚ.ಹ.

ಚಿತ್ರ: ಅಮರಾವತಿ
ನಿರ್ಮಾಣ: ಇ. ಸುಷ್ಮಾ, ಮಾಧವ ರೆಡ್ಡಿ
ನಿರ್ದೇಶನ: ಬಿ.ಎಂ. ಗಿರಿರಾಜ್
ತಾರಾಗಣ: ಅಚ್ಯುತ ಕುಮಾರ್, ಕಿರಣ್ ನಾಯಕ್, ಹೇಮಂತ್

ಕಥೆ ಚೆನ್ನಾಗಿದೆ. ಛಾಯಾಗ್ರಹಣ ಮೋಹಕವಾಗಿದೆ. ಸಂಗೀತ ಸೊಗಸಾಗಿದೆ. ಒಟ್ಟಾರೆ ಸಿನಿಮಾ ಚೆನ್ನಾಗಿದೆ. ಹೀಗೆ ಯಾವುದನ್ನೂ ಚೆನ್ನಾಗಿದೆ ಎಂದು ಹೇಳಲು ಕಷ್ಟವೆನ್ನಿಸುವ, ಚೆನ್ನಾಗಿಲ್ಲ ಎಂದೂ ಹೇಳಲಾಗದ ಸಿನಿಮಾ ‘ಅಮರಾವತಿ’. ‘ಚೆನ್ನಾಗಿದೆ’ ಎಂದು ಹೇಳುವುದೇ ಪಾಪ ಎನ್ನಿಸುವ ಭಾವ ಹುಟ್ಟಿಸುವ ಸಿನಿಮಾ ‘ಅಮರಾವತಿ’. ಸಿನಿಮಾದ ವ್ಯಾಕರಣಕ್ಕೆ ಬದಲಾಗಿ ಅಂತರಂಗದ ಕಣ್ಣಿನ ಮೂಲಕ ನೋಡಲು ಒತ್ತಾಯಿಸುವ ಸಿನಿಮಾ ‘ಅಮರಾವತಿ’.

‘ಮೈತ್ರಿ’ಯಂಥ ಪ್ರಯೋಗಶೀಲ ಚಿತ್ರವನ್ನು ರೂಪಿಸಿದ್ದ ಬಿ.ಎಂ. ಗಿರಿರಾಜ್‌, ಇದೀಗ ‘ಅಮರಾವತಿ’ ಮೂಲಕ ಪೌರಕಾರ್ಮಿಕರ ಬದುಕಿನ ಸಂಘರ್ಷಗಳನ್ನು ದೃಶ್ಯರೂಪಕ್ಕೆ ತಂದಿದ್ದಾರೆ. ಅಭಿವೃದ್ಧಿಯ ಫಲವಾಗಿ ಹುಟ್ಟಿಕೊಂಡ ಚರಂಡಿಗಳೂ ಹಾಗೂ ಅವುಗಳನ್ನು ತಿಳಿಗೊಳಿಸುವ ಪೌರ ಕಾರ್ಮಿಕರೂ ಚಿತ್ರದಲ್ಲಿದ್ದಾರೆ. ಜಲಗಾರರ ಹಸಿವು, ಪ್ರೀತಿ, ಸೆಡವುಗಳ ಜೊತೆಗೆ ಅವರ ಬದುಕಿನ ಜೊತೆಗೆ ಆಟವಾಡುವ ಕ್ರೂರಿ ವ್ಯವಸ್ಥೆಯೂ ಚಿತ್ರದಲ್ಲಿದೆ.

ಒಂದುಕ್ಷಣವೂ ಪ್ರೇಕ್ಷಕನು ಹಗುರಾಗುವುದು ನಿರ್ದೇಶಕರಿಗೆ ಇಷ್ಟವಿಲ್ಲ. ಸಿನಿಮಾದಲ್ಲಿನ ದೃಶ್ಯಗಳು ಕಥೆ ಎನ್ನಿಸದೆ, ನಮ್ಮ ನಗರಗಳ, ವಿಶೇಷವಾಗಿ ಬೆಂಗಳೂರಿನ ಚರಿತ್ರೆ–ವರ್ತಮಾನದ ರೂಪವಾಗಿ ಅನುಭವಕ್ಕೆ ಬರುತ್ತವೆ. ಈ ಮೂಲಕ ಪ್ರೇಕ್ಷಕರನ್ನೂ ಚಿತ್ರದ ಭಾಗವಾಗಿಸಿಕೊಳ್ಳುವುದು ನಿರ್ದೇಶಕರ ಉದ್ದೇಶ ಇರುವಂತಿದೆ. ಪೌರಕಾರ್ಮಿಕರ ಮುಷ್ಕರದಿಂದಾಗಿ ನಗರವೊಂದು ಕೊಳೆತು ನಾರುವುದಕ್ಕೆ ಬೆಂಗಳೂರು ಉದಾಹರಣೆಯಾಗಿದೆ. ಈ ಮುಷ್ಕರದ ಸಂದರ್ಭದಲ್ಲಿ ಸಿನಿಮಾ ಕಾಣಿಸುವ ಅಧಿಕಾರಶಾಹಿಯ ಕ್ರೌರ್ಯ ನಮ್ಮ ಎಣಿಕೆಗೆ ಸುಲಭವಾಗಿ ನಿಲುಕದ್ದು. ಕಾರ್ಮಿಕರ ನಾಯಕ ತನ್ನ ದೇಹಕ್ಕೆ ಬೆಂಕಿಹಚ್ಚಿಕೊಳ್ಳುವ ಮೂಲಕ ಜಡವ್ಯವಸ್ಥೆಯಲ್ಲಿ ಸಂಚಲನ ಉಂಟುಮಾಡಲು ಪ್ರಯತ್ನಿಸುತ್ತಾನೆ. ಆತ್ಮಾಹುತಿಯ ಈ ಪ್ರಸಂಗ ಪ್ರತಿಭಟನೆಯ ಸಶಕ್ತ ರೂಪಕದಂತಿದೆ. ಇಲ್ಲಿಗೆ ಮುಗಿದುಹೋದ ಸಿನಿಮಾವನ್ನು ಗಿರಿರಾಜ್‌ ಮತ್ತೂ ಲಂಬಿಸುತ್ತಾರೆ. ಗಾಯವನ್ನು ಕೆರೆದೂ ಕೆರೆದೂ ಕೊಳೆತುಹೋಗಿರುವ ದೇಹವನ್ನು ನಮಗೆ ಕಾಣಿಸುವ ಪ್ರಯತ್ನ ಅವರದು. ತನ್ನವರ ಮೂಲಕವೇ ಪೌರಕಾರ್ಮಿಕನೊಬ್ಬ ಚರಂಡಿಯಲ್ಲಿ ಸಮಾಧಿಯಾಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಇದು ವ್ಯಕ್ತಿಯೊಬ್ಬನ ಸಾವಾಗಿರದೆ, ಮಾನವೀಯತೆಯ ಸಮಾಧಿ ಎನ್ನುತ್ತದೆ ಸಿನಿಮಾ. ಶೋಷಿತರ ನಡುವೆಯೇ ಒಡಕುಂಟು ಮಾಡುವ ಅಧಿಕಾರಶಾಹಿಯ ದರ್ಪ ನಿರಂತರವಾಗಿರುವ ಸೂಚನೆಯೂ ಇಲ್ಲಿದೆ.

ಪೌರಕಾರ್ಮಿಕನ ಪಾತ್ರದಲ್ಲಿ ನಟಿಸಿರುವ ಅಚ್ಯುತ ಕುಮಾರ್‌ ಚಿತ್ರದ ನಾಯಕ ಮಾತ್ರವಲ್ಲ, ಕನ್ನಡ ಚಿತ್ರರಂಗದ ನಿಜವಾದ ‘ನಾಯಕ’ ಅನ್ನಿಸಿಬಿಡುತ್ತಾರೆ. ನಾಯಿಯೊಂದಿಗೆ ಎದೆಯುಬ್ಬಿಸಿಕೊಂಡು ನಡೆಯುವಷ್ಟೇ ಸಲೀಸಾಗಿ ಚರಂಡಿಯಲ್ಲೂ ಇಳಿಯುತ್ತಾರೆ. ಉಳಿದಂತೆ ಕಿರಣ್ ನಾಯಕ್, ಹೇಮಂತ್‌, ನೀನಾಸಂ ಅಶ್ವಥ್ ಹಾಗೂ ವಿದ್ಯಾ ವೆಂಕಟರಾಮ್ ಪಾತ್ರಪೋಷಣೆ ನೆನಪಿನಲ್ಲುಳಿಯುತ್ತದೆ.

ನಗರದ ಇನ್ನೊಂದು ಮುಖವನ್ನು ಕಾಣಿಸುವ ‘ಅಮರಾವತಿ’ ಚಿತ್ರದಲ್ಲೂ ಕೊರಕಲಿನ ಭಾಗಗಳಿವೆ. ತರುಣನೊಬ್ಬ ತನ್ನ ಕಾಲೇಜಿನ ಅಸೈನ್‌ಮೆಂಟ್‌ ರೂಪದಲ್ಲಿ ಸಮುದಾಯದ ಬದುಕನ್ನು ದಾಖಲಿಸುವ ಮೂಲಕ ಪೌರಕಾರ್ಮಿಕರ ಕಥೆಯನ್ನು ಹೇಳುವ ನಿರ್ದೇಶಕರ ತಂತ್ರ ವಿಶಿಷ್ಟವಾಗಿದೆ. ಆದರೆ, ಕ್ಯಾಮೆರಾದ ನಿರ್ಲಿಪ್ತತೆಯನ್ನು ನಿರ್ದೇಶಕರೇ ಮೀರುತ್ತಾರೆ. ಕೆಲವೊಮ್ಮೆ ಕಥೆಯ ವಸ್ತುವಿನಲ್ಲಿನ ತೀವ್ರತೆಯೇ ಅವರನ್ನು ನಿಯಂತ್ರಿಸಿದೆ. ಈ ತೀವ್ರತೆಗೆ ಕಿರಣ್ ಹಂಪಾಪುರ ಛಾಯಾಗ್ರಹಣ, ಜೋಯುಲ್ ಡುಬ್ಬು ಮತ್ತು ಅಭಿಲಾಷ್ ಲಾಖ್ರ ಸಂಗೀತ ಸ್ಪಂದಿಸುವಂತಿದೆ.
ಪೌರಕಾರ್ಮಿಕರ ಕಥನದೊಂದಿಗೆ ಏಕಕಾಲಕ್ಕೆ ಹಲವು ಕಥನಗಳನ್ನು ಗಿರಿರಾಜ್‌ ಹೇಳುತ್ತಾರೆ. ಎಲ್ಲವನ್ನೂ ಒಂದೇ ಚಿತ್ರದಲ್ಲಿ ಹೇಳುವ ಒತ್ತಡವನ್ನು ಅವರು ತಮ್ಮ ಮೇಲೆ ಹೇರಿಕೊಂಡಿದ್ದಾರೆ. ಆ ದಣಿವು ಪ್ರೇಕ್ಷಕರಿಗೂ ತಟ್ಟುತ್ತದೆ.

ಪೇಂಟಿಂಗ್‌ನಂತಹ ದೃಶ್ಯವೊಂದರ ಮೂಲಕ ‘ಅಮರಾವತಿ’ ಶುರುವಾಗುತ್ತದೆ. ಸಾವಿನಂಚಿನಲ್ಲಿರುವ ತಾಯಿಯೊಬ್ಬಳು ತನ್ನ ಮಗನೊಂದಿಗೆ ಫೋಟೊ ತೆಗೆಸಿಕೊಳ್ಳುವ ದೃಶ್ಯವದು. ಇಷ್ಟು ಗಾಢವಾದ, ಕಲಾತ್ಮಕವಾದ ಮತ್ತೊಂದು ದೃಶ್ಯ ಚಿತ್ರದಲ್ಲಿಲ್ಲ. ಕಲೆಯ ಸಾಧ್ಯತೆಗಳಿಗಿಂತಲೂ ಅರ್ಥದ ಸಾಧ್ಯತೆಗಳತ್ತಲೇ ಸಿನಿಮಾ ಹೆಚ್ಚು ಚಲಿಸಿದೆ. ಮಗುವನ್ನು ಕೊಲ್ಲುವ ಸನ್ನಿವೇಶವಂತೂ ಸೇಡಿಗೆ ಸೇಡು ಮಾದರಿಯದು; ಮಾನವೀಯತೆಗಾಗಿ ಹಂಬಲಿಸುವವರ ವ್ಯಕ್ತಿತ್ವವನ್ನು ಕುಗ್ಗಿಸುವಂತಹದು. ‘ದೇವರ’ ಪಾತ್ರದ ಕಲ್ಪನೆ ಕೂಡ ಸಿನಿಮಾದ ಆಶಯಕ್ಕೆ ಪೂರಕವಾಗಿಲ್ಲ.

ಸಾಧ್ಯತೆಗಳ ದೃಷ್ಟಿಯಿಂದ ಪ್ರಶ್ನೆಗಳನ್ನು ಉಳಿಸಿದರೂ, ಬದ್ಧತೆಯ ದೃಷ್ಟಿಯಿಂದ ಮುಖ್ಯವೆನ್ನಿಸುವ ‘ಅಮರಾವತಿ’ ನಮ್ಮ ಅಂತರಂಗವನ್ನು ನಾವು ಪರೀಕ್ಷಿಸಿಕೊಳ್ಳಲು ಒತ್ತಾಯಿಸುವ ಸಿನಿಮಾ.

Comments are closed.