ಕರ್ನಾಟಕ

ಜನರಿಗೆ ವಿದ್ಯುತ್ ಶಾಕ್: ಪ್ರತಿ ಯೂನಿಟ್‌ಗೆ 1.48 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ

Pinterest LinkedIn Tumblr


ಬೆಂಗಳೂರು, ಫೆ. ೭- ಸತತ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸರ್ಕಾರ ಕರೆಂಟ್ ಶಾಕ್ ಕೊಡಲು ಮುಂದಾಗಿದ್ದು, ಪ್ರತಿ ಯುನಿಟ್‌ ವಿದ್ಯುತ್‌ಗೆ 1ರೂ.48 ಪೈಸೆ, ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪೆನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಎಆರ್‌ಸಿಗೆ) ಪ್ರಸ್ತಾವನೆ ಸಲ್ಲಿಸಿವೆ.

ರಾಜ್ಯದಲ್ಲಿ ಮಳೆಯಿಲ್ಲದೆ ಜಲಾಶಯಗಳು ಬತ್ತಿ ಹೋಗಿವೆ. ಇದರಿಂದ ವಿದ್ಯುತ್ ಉತ್ಪಾದನೆ ಮೇಲೆ ವ್ಯತ್ಯಯ ಆಗಿರುವುದರಿಂದ ಸರ್ಕಾರ ಪ್ರತಿ ಯೂನಿಟ್‌ಗೆ 5 ರೂ. 8 ಪೈಸೆಗೆ ಖರೀಧಿ ಮಾಡುತ್ತಿವೆ. ಹೀಗಾಗಿ ವಿದ್ಯುತ್ ಕಂಪೆನಿಗಳಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ 1.48 ಪೈಸೆ ಹೆಚ್ಚಳ ಮಾಡುವಂತೆ ಕೆಎಆರ್‌ಸಿಗೆ ಕಂಪೆನಿಗಳು ಪ್ರಸ್ತಾವನೆ ಸಲ್ಲಿಸಿವೆ. ಆಯೋಗ ಇದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನಪರಿಷತ್‌ನಲ್ಲಿಂದು ಹೇಳಿದರು

ಪ್ರಶ್ನೋತ್ತರ ಅವಧಿಯಲ್ಲಿ ಎನ್. ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಕೆಎಆರ್‌ಸಿ ವಿದ್ಯುತ್ ಸರಬರಾಜು ಕಂಪೆನಿಗಳ ಆದಾಯ ಮತ್ತು ವೆಚ್ಚಗಳನ್ನು ಪರಿಶೀಲನೆ ಮಾಡಿ ದರ ನಿಗದಿ ಮಾಡಲಿವೆ. ಆಯೋಗದ ಹಿಂದಿನ ವರ್ಷಗಳ ದರ ಪರಿಷ್ಕರಣೆ ಮತ್ತು ಆಯೋಗದ ಅನುಮೋದನೆ ಗಮನಿಸಿ ಪ್ರಸ್ತಾಪಿಸಿದ ದರಕ್ಕಿಂತ ಕಡಿಮೆ ದರ ಅನುಮೋದಿಸುವ ಹಿನ್ನೆಲೆಯಲ್ಲಿ ಒಟ್ಟಾರೆ 1.48 ಪೈಸೆ ಹೆಚ್ಚಳ ಮಾಡುವಂತೆ ಕಂಪೆನಿಗಳು ಮನವಿ ಸಲ್ಲಿಸಿವೆ ಎಂದರು.

2012-13 ರಲ್ಲಿ 73 ಪೈಸೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ 13 ಪೈಸೆ ಹೆಚ್ಚಳಕ್ಕೆ ಅನುಮೋದನೆ, 2013-14 ರಲ್ಲಿ 70 ಪೈಸೆಗೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಮತ್ತೆ 13 ಪೈಸೆ ಹೆಚ್ಚಳ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. 2014-15 ರಲ್ಲಿ 66 ಪೈಸೆ ಹೆಚ್ಚಳ ಮಾಡುವಂತೆ ಸಲ್ಲಿಸಿದ ಮನವಿಗೆ ಕೇವಲ 32 ಪೈಸೆ, 2015-16 ರಲ್ಲಿ 80 ಪೈಸೆ ಹೆಚ್ಚಳಕ್ಕೆ ವಿದ್ಯುತ್ ಕಂಪೆನಿಗಳು ಮನವಿ ಸಲ್ಲಿಸಿದ್ದವು. ಆಗ ಬರೀ 13 ಪೈಸೆ ಹೆಚ್ಚಳಕ್ಕೆ ಆಯೋಗ ಅನುಮತಿ ನೀಡಿತ್ತು. ಈ ಎಲ್ಲದನ್ನೂ ಗಮನದಲ್ಲಿರಿಸಿಕೊಂಡು ಈ ಬಾರಿ 1.48 ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ಧ

ರಾಜ್ಯದಲ್ಲಿ ರೈತರಿಗೆ ಹಾಗೂ ಕಾರ್ಖಾನೆಗಳಿಗೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧವಾಗಿದೆ. ರೈತರಿಗೆ 7ಗಂಟೆಗಳ ಹಾಗೂ ಕೈಗಾರಿಕೆಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ರೈತರಿಗೆ 7 ಗಂಟೆ ನಿಗದಿ ಮಾಡಿದ್ದರೂ 8-10 ಗಂಟೆಗಳ ಕಾಲ ವಿದ್ಯುತ್ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದರು.

ರಾಜ್ಯದಲ್ಲಿ ಒಂಬತ್ತೂವರೆ ಸಾವಿರ ಮೆಗಾವ್ಯಾಟ್ ಬೇಡಿಕೆ ಇದ್ದು, ಹತ್ತೂವರೆ ಸಾವಿರ ಮೆಗಾವ್ಯಾಟ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು

ಎಂಟೂವರೆ ಸಾವಿರ ಕೋಟಿ ರೂ. ಸಹಾಯಧನ

ರಾಜ್ಯದಲ್ಲಿ ರೈತರಿಗೆ ಪ್ರತಿ ವರ್ಷ ಎಂಟೂವರೆ ಸಾವಿರ ಕೋಟಿ ರೂ. ಸಹಾಯ ಧನ ನೀಡುತ್ತಿದೆ. ಪ್ರತಿಯೊಬ್ಬ ರೈತರಿಗೆ 50-70 ಸಾವಿರ ರೂ. ಪುಕ್ಕಟ್ಟೆಯಾಗಿ ನೀಡುತ್ತಿದೆ ಎಂದು ಹೇಳಿದರು.

ಸವಾಲು

ರಾಜ್ಯದಲ್ಲಿ ರೈತರಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಹೆಚ್ಚ ಕಡಿಮೆ ಆಗಿದ್ದರೂ ಯಾವುದೇ ಶಿಕ್ಷೆ ಕೊಟ್ಟರೂ ಅದನ್ನು ಎದುರಿಸಲು ತಾವು ಸಿದ್ಧವಿರುವುದಾಗಿ ಡಿ ಶಿವಕುಮಾರ್ ಸದಸ್ಯ ಅಪ್ಪಾಜಿಗೌಡ ಅವರಿಗೆ ಸವಾಲು ಹಾಕಿದರು.

Comments are closed.