ಕರ್ನಾಟಕ

ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಯಾವ ಕಾಲೇಜಿನಲ್ಲೂ ಬುರ್ಖಾ, ಕೇಸರಿ ಶಾಲಿಗೆ ನಿರ್ಬಂಧವಿಲ್ಲ!

Pinterest LinkedIn Tumblr


ಶಿವಮೊಗ್ಗ: ವಿದ್ಯಾರ್ಥಿಗಳು ಕಾಲೇಜಿಗೆ ಬುರ್ಖಾ, ಕೇಸರಿ ಶಾಲು ಸೇರಿದಂತೆ ಯಾವುದೇ ವಸ್ತ್ರ ಧರಿಸಿಕೊಂಡು ಬರಲು ನಿರ್ಬಂಧವಿಲ್ಲ. ವಸ್ತ್ರಸಂಹಿತೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಜೋಗನ್‌ ಶಂಕರ್‌ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತಮಟ್ಟದ ಸಭೆ ನಿರ್ಧರಿಸಿತು.

ವಿಶ್ವವಿದ್ಯಾಲಯ ವ್ಯಾಪ್ತಿಯ ಯಾವ ಕಾಲೇಜಿನಲ್ಲೂ ವಸ್ತ್ರಸಂಹಿತೆ ಜಾರಿ ಮಾಡಿಲ್ಲ. ಸಹ್ಯಾದ್ರಿ ಕಾಲೇಜಿನಲ್ಲಿ ಸ್ಥಳೀಯವಾಗಿ ನಿರ್ಧರಿಸಿ ಎರಡು ವರ್ಷಗಳಿಂದ ವಸ್ತ್ರಸಂಹಿತೆ ಅಳವಡಿಸಿಕೊಳ್ಳಲಾಗಿತ್ತು. ವಿವಾದದ ಕಾರಣ ನಿರ್ಧಾರ ಹಿಂದಕ್ಕೆ ಪಡೆಯಲಾಗಿದೆ ಎಂದು ಕುಲಸಚಿವ ಭೋಜ್ಯಾನಾಯ್ಕ ಸಮಜಾಯಿಷಿ ನೀಡಿದರು.

ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಇಲ್ಲಸಲ್ಲದ ವಿಚಾರಗಳಿಗೆ ವಿವಾದ ಸೃಷ್ಟಿಸಿ ಕಾಲೇಜಿನ ವಾತಾವರಣ ಕಲುಷಿತಗೊಳಿಸಬಾರದು. ಕೋಮು ಭಾವನೆ ಕೆರಳಿಸಬಾರದು. ಹಾಗೆ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಅಶೋಕ್‌ ಖರೆ ಹಾಗೂ ಉಪ ವಿಭಾಗಾಧಿಕಾರಿ ಎಚ್‌.ಕೆ.ಕೃಷ್ಣಮೂರ್ತಿ ಅವರು ಎರಡೂ ಗುಂಪುಗಳ ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

ರಜೆ ವಿಸ್ತರಣೆ: ಕಾಲೇಜಿಗೆ ರಜೆಯನ್ನು ಸೋಮವಾರದವರೆಗೆ ವಿಸ್ತರಿಸಿದೆ.

ಸಿಎಫ್‌ಐ ಪ್ರತಿಭಟನೆ: ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕು ಎಂದು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

Comments are closed.