ಕರ್ನಾಟಕ

ಕಡಬಗೆರೆ ಸೀನ ಮೇಲಿನ ದಾಳಿ: ಹಲವರ ತೀವ್ರ ವಿಚಾರಣೆ

Pinterest LinkedIn Tumblr


ಬೆಂಗಳೂರು, ಫೆ.೫: ಯಲಹಂಕದ ಕೋಗಿಲು ಕ್ರಾಸ್ ಸಿಗ್ನಲ್‌ನಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ೧೫ ಮಂದಿ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಕೆಲವು ಶಂಕಿತರನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಶೀಘ್ರವೇ ಆರೋಪಿಗಳ ಪತ್ತೆ ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೂಟೌಟ್ ಸ್ಥಳದಲ್ಲಿ ದೊರಕಿದ ಗುಂಡುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಆರೋಪಿಗಳ ಸ್ಪಷ್ಟಚಿತ್ರಣ ದೊರಕಲಿದೆ. ಈಗಾಗಲೇ ನೆಲಮಂಗಲ ಸುತ್ತಮುತ್ತಲಿನ ಹಳೆಯ ೧೫ಕ್ಕೂ ಅಧಿಕ ರೌಡಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶ್ರೀನಿವಾಸ್ ಅವರು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ವೈರಿಗಳ ಸಂಖ್ಯೆ ಕೂಡ ಹೆಚ್ಚಿದೆ. ಈ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದೊಂದು ಸುಫಾರಿ ಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆದರೆ ಶ್ರೀನಿವಾಸ್ ಅವರಿಗೆ ಪ್ರಜ್ಞೆ ಬಂದ ಬಳಿಕ ಅವರ ಹೇಳಿಕೆ ಪಡೆಯಲಾಗುವುದು. ಇದು ತನಿಖೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶ್ರೀನಿವಾಸ್ ಸಹ ರೌಡಿಶೀಟರ್. ಕೊಲೆ, ಕೊಲೆಗೆ ಯತ್ನ, ಜೀವ ಬೆದರಿಕೆ ಪ್ರಕರಣದ ಆರೋಪಿ. ರಿಯಲ್ ಎಸ್ಟೇಟ್ ವ್ಯವಹಾರ ಸಹ ನಡೆಸುತ್ತಿದ್ದರು. ಹಲವರನ್ನು ಎದುರು ಹಾಕಿಕೊಂಡಿದ್ದರು. ಆತನನ್ನು ಕೊಲೆ ಮಾಡಿಸಲು ಯಾರಾದರೂ ಸುಪಾರಿ ಕೊಟ್ಟಿರಬಹುದು ಎಂಬ ಶಂಕೆ ಇದೆ. ಆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

Comments are closed.