ಕರ್ನಾಟಕ

ತರಾತುರಿಯಲ್ಲಿ ಬಿಜೆಪಿ ಸೇರದಿರಲು ನಿರ್ಧರಿಸಿದ ಎಸ್.ಎಂ.ಕೃಷ್ಣ

Pinterest LinkedIn Tumblr


ಬೆಂಗಳೂರು,ಫೆ.೫-ಕಾಂಗ್ರೆಸ್ ಪಕ್ಷ ತ್ಯಜಿಸಿರುವ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರು ತರಾತುರಿಯಲ್ಲಿ ಬಿಜೆಪಿ ಸೇರದಿರಲು ನಿರ್ಧರಿಸಿದ್ದಾರೆ.
ಎಸ್.ಎಂ ಕೃಷ್ಣ ಅವರು ಸದ್ಯದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ ಬೆನ್ನಲ್ಲೆ ಸದ್ಯಕ್ಕೆ ಬಿಜೆಪಿ ಸೇರದಿರಲು ಎಸ್.ಎಂ ಕೃಷ್ಣ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಎಸ್.ಎಂ ಕೃಷ್ಣ ಅವರು ಕಳೆದ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಬಂಧವೊಂದಿದ್ದಾರೆ. ಒಂದು ವೇಳೆ ಬಿಜೆಪಿ ಸೇರ್ಪಡೆಯಾಗುವುದಾದರೆ ಪ್ರಧಾನಿ ನರೇಂದ್ರ ಮೋದಿ ಹಾಗು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಮಾತನಾಡುತ್ತಾರೆಯೇ ವಿನಃ ಇನ್ನುಳಿದ ಯಾವುದೇ ನಾಯಕರ ಜೊತೆ ಪಕ್ಷ ಸೇರ್ಪಡೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಎಸ್.ಎಂ ಕೃಷ್ಣ ಅವರ ನಿಕಟ ಮೂಲಗಳು ತಿಳಿಸಿವೆ.
ಎಸ್.ಎಂ ಕೃಷ್ಣ ಅವರನ್ನು ಬಿಜೆಪಿಗೆ ಕರೆತರುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಆದರೆ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಇರಲು ಇಷ್ಟ ಪಡುತ್ತಿಲ್ಲ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಎಸ್.ಎಂ ಕೃಷ್ಣ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ದವಿದೆಯೋ ಅಥವಾ ಇಲ್ಲವೇ ಎನ್ನುವುದನ್ನು ಅವುರ ಸ್ಪಷ್ಟವಾಗಿ ಹೇಳಲು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಕಳೆದ ೪೬ ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ವಿವಿಧ ಹುದ್ದೆ ಹಾಗು ಸ್ಥಾನ ಮಾನ ಪಡೆದು ಅಧಿಕಾರ ಅನುಭವಿಸಿದ್ದ ೮೪ ವರ್ಷದ ಎಸ್.ಎಂ ಕೃಷ್ಣ, ಹಿರಿಯ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಕಳೆದ ತಿಂಗಳ ೨೯ ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಯಾವ ಪಕ್ಷ ಹಿರಿಯರನ್ನು ಕಡೆಗಣಿಸುತ್ತದೆಯೋ ಆ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಭಾವುಕರಾಗಿ ಹೇಳಿದ್ದ ಎಸ್.ಎಂ ಕೃಷ್ಣ ಇದೀಗ ಹಿರಿಯರನ್ನು ಕಡೆಗಣಿಸಿರುವ ಬಿಜೆಪಿಯ ಕಡೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಪಕ್ಷ ತ್ಯಜಿಸಿರುವ ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಕಡೆಯ ಪ್ರಯತ್ನವೂ ಕಾಂಗ್ರೆಸ್‌ನಲ್ಲಿ ನಡೆಸಲಾಗುತ್ತಿದೆ ಎನ್ನಲಾಗಿದೆ.

Comments are closed.