ರಾಷ್ಟ್ರೀಯ

ಪ್ಯಾನ್‌ಸಂಖ್ಯೆ ಜೋಡಿಸದಿದ್ದರೆ ಕ್ರಮ: ಖಾತೆ ನಿರ್ಬಂಧಕ್ಕೆ ಚಿಂತನೆ

Pinterest LinkedIn Tumblr


ನವದೆಹಲಿ: ನೋಟು ರದ್ದತಿ ತೀರ್ಮಾನದ ನಂತರ, ಆದಾಯಕ್ಕಿಂತ ಹೆಚ್ಚಿನ ಮೊತ್ತವನ್ನು ತಮ್ಮ ಖಾತೆಗಳಲ್ಲಿ ಜಮಾ ಮಾಡಿದವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಇಂಥ ವ್ಯಕ್ತಿಗಳು ತಮ್ಮ ಉಳಿತಾಯ ಖಾತೆ ಜೊತೆ ಪ್ಯಾನ್‌ ಸಂಖ್ಯೆಯನ್ನು ಈ ತಿಂಗಳಾಂತ್ಯದೊಳಗೆ ಜೋಡಿಸದಿದ್ದರೆ, ಖಾತೆಯಿಂದ ಹಣ ಹಿಂಪಡೆಯುವುದನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ರೀತಿಯ ಕ್ರಮ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್‌ ಬ್ಯಾಂಕ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನೋಟು ರದ್ದತಿಯ ನಂತರ ಅನುಮಾನಾಸ್ಪದವಾಗಿ ನಗದು ಹಣ ಜಮಾ ಮಾಡಿದ 18 ಲಕ್ಷ ಜನರನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ. ಅವರಿಗೆ ಇ–ಮೇಲ್‌ ಕಳುಹಿಸಿ, ಹಣದ ಮೂಲ ಯಾವುದು ಎಂಬ ಮಾಹಿತಿಯನ್ನು ಪಡೆಯಲು ಇಲಾಖೆ ಮುಂದಾಗಿದೆ.

ಇ–ಮೇಲ್‌ಗೆ ಉತ್ತರಿಸಲು ಕೇವಲ ಹತ್ತು ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈಗಾಗಲೇ ಹೇಳಿದೆ. ಅಕ್ರಮ ವಹಿವಾಟು ಪತ್ತೆ ಮಾಡಲು ಸಿಬಿಡಿಟಿಯು ‘ಹಣ ಶುದ್ಧೀಕರಣ ಅಭಿಯಾನ’ ಕೈಗೊಂಡಿದೆ.

ನೋಟು ರದ್ದತಿಯ ನಂತರ ₹ 2 ಲಕ್ಷಕ್ಕಿಂತ ಹೆಚ್ಚು ಮೊತ್ತದ ನಗದು ಹಣ ಜಮಾ ಮಾಡಿದ ಒಂದು ಕೋಟಿ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ. ಈಗ ಇಲಾಖೆಯು, ₹ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಜಮಾ ಮಾಡಿದವರು ಹಾಗೂ ₹ 3 ಲಕ್ಷದಿಂದ ₹ 5 ಲಕ್ಷದವರೆಗಿನ ಮೊತ್ತವನ್ನು ನಗದು ರೂಪದಲ್ಲಿ ಅನುಮಾನಾಸ್ಪದವಾಗಿ ಜಮಾ ಮಾಡಿದವರ ವಿವರ ಪರಿಶೀಲಿಸುತ್ತಿದೆ.

ಒಂದೇ ಪ್ಯಾನ್‌ ಸಂಖ್ಯೆ ಬಳಸಿ ₹ 2 ಲಕ್ಷದಿಂದ ₹ 2.5 ಲಕ್ಷದವರೆಗಿನ ನಗದು ಹಣವನ್ನು ಹಲವೆಡೆ ಜಮಾ ಮಾಡಿರುವ ಪ್ರಕರಣಗಳನ್ನೂ ಪತ್ತೆ ಮಾಡಲಾಗಿದೆ ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದರು.

ಅನುಮಾನಾಸ್ಪದವಾಗಿ ನಗದು ಜಮಾ ಮಾಡಿದ 18 ಲಕ್ಷ ಪ್ರಕರಣಗಳು ಮೊದಲ ಹಂತದಲ್ಲಿ ಪತ್ತೆಯಾಗಿವೆ. ‘ಹಣ ಶುದ್ಧೀಕರಣ ಅಭಿಯಾನ’ ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಅವರು ಹೇಳಿದರು.

ವ್ಯಕ್ತಿಗಳ ಆದಾಯಕ್ಕಿಂತ ಹೆಚ್ಚಿನ ಮೊತ್ತವನ್ನು ಅಂಚೆ ಕಚೇರಿ ಖಾತೆಗಳಲ್ಲೂ ಜಮಾ ಮಾಡಲಾಗಿದೆ ಎಂಬ ಅನುಮಾನದ ಅಡಿ ಅಂದಾಜು 2.25 ಲಕ್ಷ ಅಂಚೆ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಕಾರ್ಪೊರೇಟ್‌ ತೆರಿಗೆ ಕಡಿತ ಸದ್ಯಕ್ಕಿಲ್ಲ
ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾದರೆ ಮಾತ್ರವೇ ಕಾರ್ಪೊರೇಟ್‌ ತೆರಿಗೆ ತಗ್ಗಿಸಲು ಸಾಧ್ಯ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ಹೇಳಿದ್ದಾರೆ.

ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಿದರೆ ಅದರಿಂದ ಸರ್ಕಾರಕ್ಕೆ ಆಗುವ ನಷ್ಟ ಭರಿಸಲು ಬೇರೆ ಯಾವುದೇ ಮೂಲ ಇಲ್ಲ. ಹೀಗಾಗಿ, ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾದರೆ ಮಾತ್ರವೇ ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಬಹುದು ಎಂದಿದ್ದಾರೆ.

2015 ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 25ಕ್ಕೆ ನಾಲ್ಕು ವರ್ಷಗಳ ಅವಧಿಯಲ್ಲಿ ತಗ್ಗಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಘೋಷಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಯಾ, ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಬೇಕು. ಹಾಗಾಗಲು ಹೆಚ್ಚಿನ ಜನರು ಆದಾಯ ತೆರಿಗೆ ವ್ಯಾಪ್ತಿಗೆ ಬರಬೇಕು. ಜನರು ತಾವಾಗಿಯೇ ತಮ್ಮ ಆದಾಯದ ಸರಿಯಾದ ವಿವರ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದಿದ್ದಾರೆ.

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಏರಿಕೆ ಕಂಡುಬಂದರೆ, ಆಗ ಕಾರ್ಪೊರೇಟ್‌ ತೆರಿಗೆ ಕಡಿತದಿಂದ ಸರ್ಕಾರಕ್ಕೆ ಆಗುವ ನಷ್ಟ ಸರಿದೂಗಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಅಂಕಿಅಂಶ
* 18 ಲಕ್ಷ ಎಸ್‌.ಬಿ ಖಾತೆಗೆ ಅನುಮಾನಾಸ್ಪದವಾಗಿ ನಗದು ಜಮಾ ಮಾಡಿದವರು

* 1ಕೋಟಿ ₹ 2 ಲಕ್ಷ ಕ್ಕಿಂತ ಹೆಚ್ಚಿನ ನಗದು ಜಮಾ ಆಗಿರುವ ಖಾತೆಗಳು

* 2.25 ಲಕ್ಷ ಪರಿಶೀಲನೆಗೆ ಒಳಗಾಗಿರುವ ಅಂಚೆ ಖಾತೆಗಳು

Comments are closed.