ಕರ್ನಾಟಕ

ಲಕ್ಷ್ಮೇಶ್ವರದಲ್ಲಿ ಲಾಕಪ್ ಡೆತ್: ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ; ಠಾಣೆ, ವಾಹನಗಳಿಗೆ ಉದ್ರಿಕ್ತರಿಂದ ಬೆಂಕಿ

Pinterest LinkedIn Tumblr


ಲಕ್ಷ್ಮೇಶ್ವರ,ಫೆ.೫- ಅಕ್ರಮ ಮರಳು ಸಾಗಣೆ ಆರೋಪದ ಹಿನ್ನೆಲೆ ಪೊಲೀಸರ ಸೆರೆಯಲ್ಲಿದ್ದ ವ್ಯಕ್ತಿ ಲಾಕಪ್‌ನಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಲಕ್ಷ್ಮೇಶ್ವರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಿನ್ನೆ ರಾತ್ರಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದನೆಂಬ ಆರೋಪದ ಹಿನ್ನೆಲೆ ಬಟ್ಟೂರಿನ ಚಾಲಕ ಶಿವಪ್ಪ ಗಾಣಗೇರ ಎಂಬಾತನನ್ನು ಪೊಲೀಸರು ಲಾರಿ ಸಮೇತ ವಶಕ್ಕೆ ಪಡೆದಿದ್ದರು.
ಶಿವಪ್ಪ ಪೊಲೀಸ್ ಠಾಣೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಮೊದಲಿಗೆ ಪೊಲೀಸರು ಆತ ಪ್ರಜ್ಞೆ ತಪ್ಪಿರಬಹುದೆಂದು ಭಾವಿಸಿದ್ದರು. ಆದರೆ ಆತ ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ ಶಿವಪ್ಪನ ಮನೆಯರಿಗೆ ಮಾಹಿತಿ ನೀಡಿದ್ದಾರೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಶಿವಪ್ಪನ ಕುಟುಂಬದವರು, ಆತ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಬದಲಿಗೆ ಪೊಲೀಸರ ಚಿತ್ರಹಿಂಸೆಯಿಂದಲೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಲಕ್ಷ್ಮೇಶ್ವರ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.

ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಐದಾರು ಟ್ರ್ಯಾಕ್ಟರ್‌ಗಳಲ್ಲಿ ನೂರಾರು ಮಂದಿ ಗ್ರಾಮಸ್ಥರು ಪೊಲೀಸ್ ಠಾಣೆಯತ್ತ ದೌಡಾಯಿಸಿರು. ಕೈಗೆ ಸಿಕ್ಕ ಕಲ್ಲು, ಬಡಿಗೆ ಮತ್ತಿತರ ವಸ್ತುಗಳಿಂದ ಕಿಟಕಿ, ಬಾಗಿಲುಗಳನ್ನು ಮುರಿದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಠಾಣೆಗೆ ಬೆಂಕಿಯಿಟ್ಟಿದ್ದಾರೆ.
ಪೊಲೀಸ್ ಠಾಣೆಯ ಆವರಣದಲ್ಲಿದ್ದ ಸಿಪಿಐ ಮತ್ತು ಪಿಎಸ್‌ಐ ಅವರ ವಾಹನಗಳೂ ಬೆಂಕಿಗಾಹುತಿಯಾಗಿವೆ. ಗ್ರಾಮಸ್ಥರ ಈ ದಿಢೀರ್ ದಾಳಿಯಿಂದ ಕಂಗಾಲಾದ ಪೊಲೀಸರು ಠಾಣೆಯಿಂದ ಪರಾರಿಯಾಗಿದ್ದಾರೆ.
ಇಡೀ ಪೊಲೀಸ್ ಠಾಣೆ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಿ ಹೊತ್ತಿ ಉರಿದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗದಗದಿಂದ ಲಕ್ಷ್ಮೇಶ್ವರಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಧಾವಿಸಿದೆ. ಗ್ರಾಮಸ್ಥರ ಗುಂಪು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಲಘು ಲಾಠಿ ಪ್ರಹಾರ:
ಠಾಣೆಯನ್ನು ಧ್ವಂಸಗೊಳಿಸುವಲ್ಲಿ ನಿರತರಾಗಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ ಗದಗ ಡಿವೈಎಸ್‌ಪಿ ವಿಜಯ ಡಂಬಳ ಹಾಗೂ ಮುಂಡರಗಿ, ಶಿರಹಟ್ಟಿ, ಗದಗದ ಸಿಪಿಐ ಮತ್ತಿತರ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಧರಣಿ:
ಪೊಲೀಸ್ ಠಾಣೆಯ ಮುಂದೆ ಶಿವಪ್ಪನ ಶವವಿರಿಸಿ, ಆತನ ತಂದೆ-ತಾಯಿ ಹಾಗೂ ಗ್ರಾಮಸ್ಥರು ಧರಣಿ ನಡೆಸುತ್ತಿದ್ದು, ಶಿವಪ್ಪ ಪೊಲೀಸರ ಚಿತ್ರ ಹಿಂಸೆಯಿಂದಲೇ ಸಾವನ್ನಪ್ಪಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಘೋಷಿತ ಬಂದ್:
ಠಾಣೆಯಲ್ಲಿ ನಡೆಯುತ್ತಿದ್ದ ಗಲಭೆ ಸುದ್ದಿ ಹರಡುತ್ತಿದ್ದಂತೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಯಿತಲ್ಲದೇ, ವಾಹನಗಳ ಸಂಚಾರವೂ ಸ್ಥಗಿತಗೊಂಡು ಅಘೋಷಿತ ಬಂದ್ ವಾತಾವರಣ ನಿರ್ಮಾಣಗೊಂಡಿತ್ತು.
ಘಟನೆಯ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

Comments are closed.