ಕರ್ನಾಟಕ

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ: ಪ್ರಭಾರ ಮುಖ್ಯ ಶಿಕ್ಷಕ ಬಂಧನ

Pinterest LinkedIn Tumblr


ಗುಬ್ಬಿ, ಫೆ. ೧- ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಪ್ರಭಾರ ಮುಖ್ಯ ಶಿಕ್ಷಕರೊಬ್ಬರನ್ನು ಗುಬ್ಬಿ ಪೊಲೀಸರು ವಶಕ್ಕೆ ಪಡೆದು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲ್ಲೂಕಿನ ಕಡಬಾ ಹೋಬಳಿ ಕುಣಾಘಟ್ಟ ಗ್ರಾಮದ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವೆಂಕಟೇಶ್ (52) ಎಂಬಾತ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಆರೋಪ ಬಂದೊಡನೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಶಿಕ್ಷಕ ವೆಂಕಟೇಶ್ ಅವರನ್ನು ಹಿಡಿದು ಗುಬ್ಬಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಾಲೆಯಲ್ಲಿ ಶೌಚಾಲಯ ಸ್ವಚ್ಚತೆಗೆ ತಿಳಿಸಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಶಿಕ್ಷಕ ವೆಂಕಟೇಶ್ ಮನೆಯವರಿಗೆ ತಿಳಿಸಿದರೆ ಶಾಲೆಗೆ ಬಾರದಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆಂದು ವಿದ್ಯಾರ್ಥಿನಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿದ ಪೊಲೀಸರು ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯವೆಸಗಿರುವ ಹಿನ್ನೆಲೆಯಲ್ಲಿ ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಶಿಕ್ಷಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗುಬ್ಬಿ ಠಾಣೆಗೆ ಸಿಡಿಪಿಒ ಕೆ.ಆರ್. ಹೊನ್ನೇಶಪ್ಪ ಭೇಟಿ ನೀಡಿ ಬಾಲಕಿಯ ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಕುಣಾಘಟ್ಟ ಗ್ರಾಮಸ್ಥರು ಶಿಕ್ಷಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಶಾಲೆಯಲ್ಲಿ ನಡೆದ ದೌರ್ಜನ್ಯದ ಬಗ್ಗೆ ಖಂಡಿಸಿದ ಗ್ರಾಮಸ್ಥರು ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ ಎಂದು ಪ್ರಶ್ನಿಸಿದರು. ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

FacebookGoogle+WhatsAppGoogle GmailShare

Comments are closed.