ಕರ್ನಾಟಕ

ಈರುಳ್ಳಿ ಲಾರಿಯಲ್ಲಿ ಹಣದ ಮೂಟೆ!

Pinterest LinkedIn Tumblr


ಬೆಂಗಳೂರು, ಜ. ೩೧- ಈರುಳ್ಳಿ, ಆಲೂಗೆಡ್ಡೆ ಮೂಟೆಗಳ ನಡುವೆ ಅಕ್ರಮವಾಗಿ ಹಣದ ಮೂಟೆಗಳನ್ನು ಇಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ಮಿನಿ ಗೂಡ್ಸ್ ಲಾರಿಯಲ್ಲಿದ್ದ 4 ಕೋಟಿ 12 ಲಕ್ಷ 78 ಸಾವಿರ ಹಣವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂರರಿಂದ ನಾಲ್ಕು ಮೂಟೆಗಳಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಕೇರಳದ ಕ್ಯಾಲಿಕಟ್ ಜಿಲ್ಲೆಯ ಪರಪ್ಪನ್ ಕೋಯಿಲ್‌ನ ಮೊಹ್ಮದ್ ಅಫ್ಜಲ್ ಅಲಿಯಾಸ್ ಅಫ್ಜಲ್ (23), ಅಬ್ದುಲ್ ನಾಸೀರ್ ಅಲಿಯಾಸ್ ನಾಸೀರ್ (44), ಶಂಶುದ್ದೀನ್ (39) ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು.

ಶೇ. 75 ರಷ್ಟು ಹೊಸ 2 ಸಾವಿರ ಮುಖ ಬೆಲೆಯ ನೋಟುಗಳು, 500 ಮುಖ ಬೆಲೆಯ ಶೇ. 20 ಹಾಗೂ 100 ರೂ. ಮುಖ ಬೆಲೆಯ ಒಟ್ಟು 4 ಕೋಟಿ 12 ಲಕ್ಷ 78 ಸಾವಿರದ 300 ರೂ.ಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಹಣ, ಮಿನಿ ಗೂಡ್ಸ್ ಲಾರಿ, ಟಯೊಟಾ ಫಾರ್ಚುನರ್ ಕಾರು, 35 ಮೂಟೆ ಈರುಳ್ಳಿ ಹಾಗೂ 10 ಮೂಚೆ ಆಲೂಗೆಡ್ಡೆಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೊಡಿಗೇಹಳ್ಳಿಯ ಬಳಿ ಮಿನಿ ಗೂಡ್ಸ್ ಲಾರಿಯಲ್ಲಿ ಈರುಳ್ಳಿ. ಆಲೂಗೆಡ್ಡೆ ಮೂಟೆಗಳ ನಡುವೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ಆರೋಪಿಗಳು ಕೊಡಿಗೇಹಳ್ಳಿಯ ಆನಂದ ನಗರ ಮನೆಯೊಂದರಲ್ಲಿ ಕಳೆದ ಕೆಲವು ದಿನಗಳಿಂದ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದ್ದು ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಆರೋಪಿಗಳು 1 ಲಕ್ಷಕ್ಕೆ 100 ರೂ.ಗಳ ಕಮಿಷನ್ ಆಧಾರದ ಮೇಲೆ ಹಣ ಸಾಗಿಸುತ್ತಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಹಣ ಎಲ್ಲಿಂದ ಸಂಗ್ರಹಿಸಲಾಗಿತ್ತು. ಅದರ ಮೂಲ ಯಾವುದೇ? ಎನ್ನುವುದೂ ಸೇರಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ತಿಳಿಸಿದ್ದಾರೆ.

Comments are closed.