ಕರ್ನಾಟಕ

ಐಎಎಸ್ ಅಧಿಕಾರಿಗೆ ಶಾಸಕ ಪ್ರಾಣ ಬೆದರಿಕೆ!

Pinterest LinkedIn Tumblr


ಬೆಂಗಳೂರು(ಜ.31): ಮುಚ್ಚಿ ಹೋಗಿರುವ ಶಿಕ್ಷಣ ಸಂಸ್ಥೆಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಸಂಬಂಧ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಿತಿ ಅಧ್ಯಕ್ಷ ಹಾಗೂ ಮಾಯಕೊಂಡ ಶಾಸಕ ಕೆ.ಶಿವಮೂರ್ತಿ ನಾಯಕ್​ ಅವರು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್​ ಸೇಠ್​ ಅವರಿಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಶಾಸಕರ ದಬ್ಬಾಳಿಕೆಯನ್ನು ಕೂಡಲೇ ನಿಯಂತ್ರಿಸಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಅವರಿಗೆ ಅಂತಿಮ ಎಚ್ಚರಿಕೆ ನೀಡಿ ಎಂದು ಸಚಿವ ತನ್ವೀರ್​ ಸೇಠ್​ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಖುದ್ದು ಅಜಯ್​ ಸೇಠ್​ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವ ತನ್ವೀರ್​ ಸೇಠ್​ ಅವರಿಗೆ ಗೌಪ್ಯ ಪತ್ರ ಬರೆದಿದ್ದಾರೆ. ಈ ಗೌಪ್ಯ ಪತ್ರ ಸುವರ್ಣನ್ಯೂಸ್​ಗೆ ಲಭ್ಯವಾಗಿದೆ.
ಚಿತ್ರದುರ್ಗ ಜಿಲ್ಲೆಯ ಬಂಜಾರ ಯುವಕ ಸಂಘದ ಅಧೀನದಲ್ಲಿರುವ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಇಂದಿರಾ ಪ್ರಿಯದರ್ಶಿನಿ ಪ್ರೌಢಶಾಲೆ, ನ್ಯೂ ಎಜುಕೇಷನ್​ ಪಬ್ಲಿಕ್​ ಶಾಲೆ, ಪಂಪಾರೂಢ ಸ್ವಾಮಿ ಪದವಿ ಪೂರ್ವ ಕಾಲೇಜು ಕಾಲೇಜು ಹಲವು ವರ್ಷಗಳಿಂದ ಮುಚ್ಚಿ ಹೋಗಿವೆ. ಹೀಗಾಗಿ ನಿಯಮಗಳ ಅಡಿಯಲ್ಲಿ ವೇತನ ಅನುದಾನಕ್ಕೆ ಒಳಪಡಿಸಲು ಅವಕಾಶಗಳಿಲ್ಲ ಎಂದು ಅಜಯ್​ ಸೇಠ್​ ಅವರು ವಾಸ್ತಾವಂಶಗಳನ್ನು ವಿವರಿಸಿದ್ದರೂ ವೇತನ ಅನುದಾನಕ್ಕೆ ಒಳಪಡಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಶಾಸಕ ಶಿವಮೂರ್ತಿ ನಾಯಕ್​ ಅವರು ಅಜಯ್​ ಸೇಠ್​ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ, ಬೈಗುಳ, ಜೀವ ಬೆದರಿಕೆಯನ್ನು ಶಿವಮೂರ್ತಿ ನಾಯಕ್​ ಅವರು ಒಡ್ಡಿದ್ದಾರೆ ಎಂದು ಅಜಯ್​ ಸೇಠ್​ ಅವರು ಬರೆದಿರುವ ಗೌಪ್ಯ ಪತ್ರದಿಂದ ತಿಳಿದು ಬಂದಿದೆ.
ಗೌಪ್ಯ ಪತ್ರದಲ್ಲೇನಿದೆ?
ಶಾಸಕ ಶಿವಮೂರ್ತಿ ನಾಯಕ್​ ಅವರು ತಮ್ಮ ಕಚೇರಿಗೆ ಜನವರಿ 28ರ ಬೆಳಗ್ಗೆ 11ಕ್ಕೆ ಬಂದಿದ್ದರು. ಅವರೇ ಅಧ್ಯಕ್ಷರಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ವೇತನ ಅನುದಾನ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿಯೊಂದಿಗೆ ತಗಾದೆ ತೆಗೆದಿದ್ದಾರೆ. ವೇತನ ಅನುದಾನಕ್ಕೆ ಒಳಪಡಿಸಲು ಅವಕಾಶ ಇಲ್ಲ ಎಂದು ವಾಸ್ತವಾಂಶಗಳನ್ನು ವಿವರಿಸಿದರೂ ಕೇಳಿಸಿಕೊಳ್ಳಲಿಲ್ಲ. ಮಾನ್ಯ ಶಾಸಕರು ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿ ಅಪಮಾನಗೊಳಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ನಾನು ಭರವಸೆ ಸಮಿತಿಗೆ ಹೋಗಲು ಮುಂದಾದಾಗ ಆಫೀಸ್​ ಕಾರಿಡಾರ್​ನಲ್ಲೇ ಕೂಗಾಡಿದ್ದಾರೆ. ತನ್ನದೇ ಸರ್ಕಾರ ಇರುವುದು. ಸರ್ಕಾರದ ಹಣ…ತಮ್ಮ ಹಣ ಎಂದೆಲ್ಲಾ ಕೂಗಾಡಿದ್ದಾರೆ. ಶಾಸಕರು ಸಲ್ಲಿಸಿರುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕಿದೆ. ತಮ್ಮ ಪರವಾಗಿ ವರದಿ ಸಲ್ಲಿಸಬೇಕು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಪತ್ರದಲ್ಲಿ ಘಟನೆಯನ್ನು ವಿವರಿಸಿದ್ದಾರೆ.

ಸಚಿವ ತನ್ವೀರ್​ ಸೇಠ್​ ಪತ್ರ
ಅಜಯ್​ ಸೇಠ್​ ಅವರು ಮೊದಲು ಘಟನಾವಳಿಗಳನ್ನು ಇಲಾಖೆ ಸಚಿವ ತನ್ವೀರ್​ ಸೇಠ್​ ಅವರ ಗಮನಕ್ಕೆ ಪತ್ರ ಮುಖೇನ ತಂದಿದ್ದರು. ಈ ಪತ್ರ ಅಧರಿಸಿ ತನ್ವೀರ್​ ಸೇಠ್​ ಅವರು §ಶಾಸಕ ಶಿವಮೂರ್ತಿ ನಾಯಕ್​ ಈ ಹಿಂದೆ ಕೂಡ ತಮ್ಮ ಆಪ್ತ ಕಾರ್ಯದರ್ಶಿಯವರ ಮೇಲೂ ತಮ್ಮ ಸಮ್ಮುಖದಲ್ಲಿಯೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದನೆ, ಬೈಗುಳ, ಜೀವ ಬೆದರಿಕೆ ಒಡ್ಡಿದ್ದರು.ಪುನಃ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೂ ಜೀವ ಬೆದರಿಕೆ ಒಡ್ಡಿದ್ದಾರೆ. ಇದು ಇಲಾಖೆಗೆ ಮುಜುಗರ ಮಾತ್ರವಲ್ಲದೆ, ಇವರ ನಡವಳಿಕೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ತನ್ವೀರ್​ ಸೇಠ್​ ಮುಖ್ಯಮಂತ್ರಿಗೆ ಬರೆದಿರುವ ಪತ್ರದಿಂದ ಗೊತ್ತಾಗಿದೆ.
ಅಜಯ್​ ಸೇಠ್​ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣ ಸಂಬಂಧ ಸುವರ್ಣನ್ಯೂಸ್​ ಎರಡು ದಿನದ ಹಿಂದೆಯೇ ವರದಿ ಬಿತ್ತರಿಸಿತ್ತು. ಶಿವಮೂರ್ತಿ ನಾಯಕ್​ ಅವರು ಈ ಪ್ರಕರಣ ಸಂಬಂಧ ಸುವರ್ಣನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮೀಸಲಿರುವ ಅನುದಾನವನ್ನು ಬಳಕೆ ಮಾಡುತ್ತಿಲ್ಲ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಲು ಹೋಗಿದ್ದೆ. ತುಸು ಗಡುಸಾಗಿ ಮಾತಾಡಿದ್ದೆ ಎಂದಷ್ಟೇ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Comments are closed.