ರಾಷ್ಟ್ರೀಯ

ಏಕಕಾಲದ ಚುನಾವಣೆಗೆ ರಾಷ್ಟ್ರಪತಿ ಸೂಚನೆ

Pinterest LinkedIn Tumblr


ನವದೆಹಲಿ, ಜ. ೩೧- ಅಧಿಕಾರ ದುರುಪಯೋಗ, ಹಣಬಲ, ತೋಳ್ಬಲಕ್ಕೆ ಕಡಿವಾಣ ಹಾಕಲು ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ರಚನಾತ್ಮಕ ಚರ್ಚೆ ನಡೆಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.

ಪದೇ ಪದೇ ಚುನಾವಣೆಗಳು ದೇಶದಲ್ಲಿ ನಡೆಯುವುದರಿಂದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಧಕ್ಕೆಯಾಗಲಿದೆ. ಸಾಮಾನ್ಯ ಜನಜೀವನ, ಅಗತ್ಯ ಸೇವೆಗಳು ಮತ್ತು ಅಪಾರ ಪ್ರಮಾಣದ ಮಾನವ ಸಂಪನ್ಮೂಲವು ವ್ಯರ್ಥವಾಗಲಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಯನ್ನು ದೇಶದಲ್ಲಿ ಏಕಕಾಲಕ್ಕೆ ನಡೆಸುವ ಬಗ್ಗೆ ರಾಜಕೀಯ ಪಕ್ಷಗಳು ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವುದು ಒಳಿತು ಎಂದು ಕಿವಿಮಾತು ಹೇಳಿದ್ದಾರೆ.

ಸಂಸತ್ತಿನ ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಅತೀವ ಆಸಕ್ತಿ ಮತ್ತು ಒಲವು ಹೊಂದಿದ್ದು, ಅದಕ್ಕೆ ಪೂರಕವಾಗಿ ವಿವಿಧ ರಾಜಕೀಯ ಪಕ್ಷಗಳು ರಚನಾತ್ಮಕ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವುದಾದರೆ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಚರ್ಚಿಸಿ ತಮ್ಮ ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಕರೆ ನೀಡಿದ್ದಾರೆ.

ಸಾಧನೆಗಳ ಅನಾವರಣ

ನೋಟು ಅಮಾನ್ಯದ ನಿರ್ಧಾರದಿಂದಾಗಿ ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟು ಹಾಗೂ ಉಗ್ರರ ಉಪಟಳಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಿದೆ. ನೋಟು ಅಮಾನ್ಯದ ಕಠಿಣ ನಿರ್ಧಾರ ತೆಗೆದುಕೊಂಡರೂ ಭವಿಷ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಅನಾವರಣ ಮಾಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಾಗೂ ಗಡಿ ಭಾಗದ ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಎಲ್ಲರ ಅಭಿವೃದ್ಧಿ

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದಡಿ ಕೇಂದ್ರ ಸರ್ಕಾರ ಅಚಲ ವಿಶ್ವಾಸ ಹೊಂದಿದ್ದು, ಎಲ್ಲರ ಅಭಿವೃದ್ಧಿ ಸರ್ಕಾರದ ಮೂಲಮಂತ್ರವಾಗಿದೆ. ಬಡವರು, ಹಿಂದುಳಿದವರು ಸೇರಿದಂತೆ ಎಲ್ಲರ ಶ್ರೇಯೋಭಿವೃದ್ಧಿಗೆ ಸರ್ಕಾರ ಗಮನ ಹರಿಸಿದೆ ಎಂದು ಹೇಳಿದರು.

ಸಣ್ಣ ವ್ಯಾಪಾರಿಗಳಿಗೆ ಮುದ್ರಾ ಬ್ಯಾಂಕ್ ಯೋಜನೆಯಡಿ 2 ಲಕ್ಷ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ. ಮನೆಗಳಿಲ್ಲದ ಕಡು ಬಡವರಿಗೆ ದೇಶಾದ್ಯಂತ ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊ‌ಡುವ ಉದ್ದೇಶ ಹೊಂದಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ 11 ಸಾವಿರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜನಾಂದೋಲನ

ದೇಶದಲ್ಲಿ ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾಗಿ ಮಾರ್ಪಟ್ಟಿರುವುದು ಶ್ಲಾಘನೀಯ. ದೇಶದ ಮೂರು ರಾಜ್ಯಗಳು ಈಗಾಗಲೇ ಬಯಲು ಶೌಚಮುಕ್ತ ರಾಜ್ಯವನ್ನಾಗಿ ಪ್ರಕಟಿಸಿವೆ. ಈ ದಿಸೆಯಲ್ಲಿ ಇನ್ನು ಹಲವು ರಾಜ್ಯಗಳು ಹೆಜ್ಜೆ ಇಟ್ಟಿವೆ ಎಂದು ಹೇಳಿದರು.

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ 5 ಕೋಟಿ ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಕಡು ಬಡವರಿಗೆ ಅಡುಗೆ ಅನಿಲ ನೀಡುವ ಉದ್ದೇಶದಿಂದ 2.2 ಕೋಟಿ ಜನ ಸಹಾಯಧನವನ್ನು ತೊರೆದಿದ್ದಾರೆ ಎಂದು ಹೇಳಿದ ಅವರು, ನವಜಾತ ಶಿಶುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಂದ್ರ ಧನುಷ್ ಯೋಜನೆಯಡಿ 55 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸಲಾಗಿದೆ ಎಂದರು.

ಒಳ್ಳೆಯ ನಿರ್ಧಾರ

ಸ್ವಾತಂತ್ರ್ಯ ಬಂದ ಬಳಿಕ ಪ್ರತ್ಯೇಕವಾಗಿ ಮಂಡನೆಯಾಗುತ್ತಿದ್ದ ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್‌ನ್ನು ವಿಲೀನಗೊಳಿಸಿ ಒಂದೇ ಬಜೆಟ್ ಮಂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, ರೈತರ ಅನುಕೂಲಕ್ಕಾಗಿ ಕಿಸಾನ್ ಕಾರ್ಡ್‌ಗೆ ಬದಲಾಗಿ ರುಪೆ ಕಾರ್ಡ್ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಸುರಕ್ಷತಾ ಮಾತೃತ್ವ ಅಭಿಯಾನ ಯೋಜನೆಯ‌ಡಿ ಪ್ರತಿ ತಿಂಗಳ 9ನೇ ತಾರೀಖು ಗರ್ಭಿಣಿ ಮಹಿಳೆಯರ ಉಚಿತ ತಪಾಸಣೆ ಹಾಗೂ ಹೆರಿಗೆ ರಜೆಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ನಗದುರಹಿತ ವಹಿವಾಟು

ನಗದುರಹಿತ ವಹಿವಾಟನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸದಾಗಿ ಭೀಮ್ ಆಪ್ ಜಾರಿಗೆ ತರಲಾಗಿದೆ. 7ನೇ ವೇತನ ಆಯೋಗದಿಂದ 50 ಲಕ್ಷ ಉದ್ಯೋಗಿಗಳು ಹಾಗೂ 35 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Comments are closed.