ಕರ್ನಾಟಕ

ವಕೀಲ ಅಮಿತ್ ಕೊಲೆ ಪ್ರಕರಣ: ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌ ಸಂದೇಶ ಸಂಗ್ರಹ

Pinterest LinkedIn Tumblr

ಬೆಂಗಳೂರು: ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದ್ದ ವಕೀಲ ಅಮಿತ್‌ ಕೊಲೆ ಹಾಗೂ ಪಿಡಿಒ ಶ್ರುತಿಗೌಡ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅವರಿಬ್ಬರ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದಾರೆ.

‘ಅಮಿತ್‌ ಅವರ ಸ್ನೇಹಿತನೊಬ್ಬನಿಗೆ ಶ್ರುತಿಗೌಡ ಫೇಸ್‌ಬುಕ್‌ನಲ್ಲಿ ಗೆಳತಿಯಾಗಿದ್ದರು. ನಂತರ ಅಮಿತ್ ಕೂಡ ಶ್ರುತಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ಬಳಿಕ ಪರಸ್ಪರರು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ  ಹತ್ತಿರವಾಗಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಅವರಿಬ್ಬರ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಮೊಬೈಲ್‌ ಸಂದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಅವರಿಗೆ ಹೆಚ್ಚಿನ ಸಂಖ್ಯೆಯ ಸ್ನೇಹಿತರಿದ್ದು, ಅವರ ಪೈಕಿ ಆಪ್ತರು ಯಾರು ಎಂಬುದನ್ನು ಪತ್ತೆ ಮಾಡಿ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಯಾವಾಗಲೂ ಆನ್‌ಲೈನ್: ‘ಶ್ರುತಿ, ಬಾತ್‌ರೂಮ್‌ಗೆ ಹೋಗುವಾಗಲೂ ಮೊಬೈಲ್‌ ತೆಗೆದುಕೊಂಡು ಹೋಗುತ್ತಿದ್ದಳು. ಆಗಲೂ ಆಕೆ ಹಾಗೂ ಅಮಿತ್‌ನ ವಾಟ್ಸ್‌ಆ್ಯಪ್‌ ಆನ್‌ಲೈನ್‌ ಇರುತ್ತಿತ್ತು. ಅದನ್ನು ಹಲವು ಬಾರಿ ಖಾತರಿ ಮಾಡಿಕೊಂಡಿದ್ದೆ’ ಎಂದು ರಾಜೇಶ್‌ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ತಿಂಗಳಿನಲ್ಲಿ ಚಾರ್ಜ್‌ಶೀಟ್

‘ಆರೋಪಿಗಳಾದ ರಾಜೇಶ್‌, ಅವರ ತಂದೆ ಗೋಪಾಲಕೃಷ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಫ್‌ಎಸ್‌ಎಲ್‌ ವರದಿ ಕೈಸೇರಿದ ಕೂಡಲೇ ದೋಷಾರೋಪಪಟ್ಟಿ ಸಲ್ಲಿಸುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Comments are closed.