ಕರ್ನಾಟಕ

ರಾಯಣ್ಣ ಬ್ರಿಗೇಡ್ ಚಟುವಟಿಕೆಗೆ ನಿರ್ಬಂಧಕ್ಕೆ ಅಮಿತ್‌ ಷಾರಿಂದ ಕಟ್ಟಪ್ಪಣೆ

Pinterest LinkedIn Tumblr


ಬೆಂಗಳೂರು: ರಾಯಣ್ಣ ಬ್ರಿಗೇಡ್ ಸಂಘಟನೆ ಕೈಬಿಟ್ಟು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವ ವಹಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ಷಾ ನಿವಾಸದಲ್ಲಿ ಶುಕ್ರವಾರ ರಾತ್ರಿ 7.30ರಿಂದ10.25ರವರೆಗೆ ನಡೆದ ಸಂಧಾನ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಕಾಂಗ್ರೆಸ್‌ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ ಶ್ರಮಿಸಬೇಕು. ಪಕ್ಷದ ವೇದಿಕೆ ಹೊರತು ಉಳಿದ ಯಾವುದೇ ಸಂಘಟನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಅಮಿತ್‌ ಷಾ ಹೇಳಿದ್ದಾರೆ ಎಂದು ಗೊತ್ತಾಗಿದೆ.

‘ರಾಯಣ್ಣ ಬ್ರಿಗೇಡ್‌ ಸಂಘಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಗುರುವಾರವಷ್ಟೇ ಕೂಡಲಸಂಗಮದಲ್ಲಿ ಘೋಷಿಸಿದ್ದ ಈಶ್ವರಪ್ಪ ಅವರಿಗೆ ಇದರಿಂದ ಹಿನ್ನಡೆಯಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ.

ಸಂಧಾನ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು, ‘ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಶ್ರಮಿಸಲು ತೀರ್ಮಾನಿಸಿದ್ದೇವೆ. ಇನ್ನು ಮುಂದೆ ಒಡಕಿನ ಮಾತಿಲ್ಲ. ಅಮಿತ್‌ ಷಾ ಅವರು ಇದೇ ಸೂಚನೆ ನೀಡಿದ್ದಾರೆ’ ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮಾತನಾಡಿ, ‘ಕರ್ನಾಟಕದಲ್ಲಿ ಪಕ್ಷದ ಗೊಂದಲಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಸಂಕಲ್ಪ ತೊಡುವಂತೆ ಅಮಿತ್‌ ಷಾ ಸೂಚಿಸಿದ್ದಾರೆ’ ಎಂದು ಅವರು ವಿವರಿಸಿದರು.

‘ರಾಯಣ್ಣ ಬ್ರಿಗೇಡ್ ಸಂಘಟನೆಯ ಕಾರ್ಯಕ್ರಮದಲ್ಲಿ ಬಿಜೆಪಿಯ ಯಾವುದೇ ನಾಯಕರು ಭಾಗವಹಿಸುವುದಿಲ್ಲ. ಹಿಂದುಳಿದ ಮೋರ್ಚಾ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ರಾಯಣ್ಣ ನೆನಪಿನ ಕಾರ್ಯಕ್ರಮ ಆಯೋಜಿಸಲು ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

‘ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿ ವಹಿಸಿದ್ದಕ್ಕೆ ಸಂತಸವಾಗಿದೆ. ಪಕ್ಷದ ವೇದಿಕೆ ಹೊರತುಪಡಿಸಿ ಬೇರೆ ಯಾವುದೇ ಸಂಘಟನೆಗಳು ಏರ್ಪಡಿಸುವ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸದಂತೆ ರಾಷ್ಟ್ರೀಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ’ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಆದರೆ, ‘ರಾಯಣ್ಣ ಬ್ರಿಗೇಡ್‌ ಸಂಘಟಿಸುವ ರಾಜಕೀಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದಾಗಿ ಷಾ ಅವರಿಗೆ ಮನವರಿಕೆ ಮಾಡಿದ್ದೇನೆ. ಅದಕ್ಕೆ ಅವರು ನಿರಾಕರಿಸಿಲ್ಲ’ ಎಂದೂ ಹೇಳಿದರು.

ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌, ದಕ್ಷಿಣ ರಾಜ್ಯಗಳ ಸಂಘಟನಾ ಉಸ್ತುವಾರಿ ಬಿ.ಎಲ್‌. ಸಂತೋಷ್, ಆರ್‌ಎಸ್‌ಎಸ್‌ ಪ್ರಮುಖ ಮುಕುಂದ ಅವರು ಪಾಲ್ಗೊಂಡಿದ್ದರು.

ಬಿಕ್ಕಟ್ಟು ಶಮನಕ್ಕೆ ಸಮಿತಿ ರಚನೆ

ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಬಗೆಹರಿಸಲು ಅಮಿತ್‌ ಷಾ ನಾಲ್ವರ ಸಮಿತಿ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುರಳೀಧರರಾವ್‌ ಸಮಿತಿ ನೇತೃತ್ವ ವಹಿಸಲಿದ್ದು, ಯಡಿಯೂರಪ್ಪ, ಬಿ.ಎಲ್‌. ಸಂತೋಷ, ಅರುಣಕುಮಾರ್ ಸದಸ್ಯರಾಗಿರುತ್ತಾರೆ.
ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ ಕುರಿತ ಅಪಸ್ವರ, ಯಡಿಯೂರಪ್ಪ ಅವರ ಏಕಪಕ್ಷೀಯ ಧೋರಣೆ, ರಾಯಣ್ಣ ಬ್ರಿಗೇಡ್‌ ಸಂಘಟನೆ ಭವಿಷ್ಯ ಸೇರಿದಂತೆ ಎಲ್ಲ ವಿಷಯವನ್ನೂ ಫೆಬ್ರುವರಿ 10ರೊಳಗೆ ಇತ್ಯರ್ಥಪಡಿಸಲು ಅಮಿತ್‌ ಷಾ ಗಡುವು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.