ರಾಷ್ಟ್ರೀಯ

ರೈಲಿನಲ್ಲಿ ಸರಬರಾಜು ಮಾಡಿದ ಆಹಾರ ತಿನ್ನುತ್ತಿದ್ದೀರಾ?

Pinterest LinkedIn Tumblr


ನಮ್ಮ ದೇಶದ ನರನಾಡಿಯಾಗಿರೋ ರೈಲು ಇಲಾಖೆಯಲ್ಲಿ ಆಹಾರ ಟೆಂಡರುದಾರರು ನಿಯಮ ಮೀರಿ ವರ್ತಿಸುತ್ತಿದ್ದಾರೆ. ಪ್ರಯಾಣಿಕರಿಗೆ ಕಳಪೆ ಆಹಾರ ನೀಡಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ.
ಇದಕ್ಕೆ ಬೆಂಗಳೂರಿನಿಂದ ಹೊರಡೋ ರೈಲುಗಳಿಗೆ ಆಹಾರ ಸರಬರಾಜು ಮಾಡೋ ಟೆಂಡರ್​ ಪಡೆದಿರೋ ಕೆ.ಎಮ್​.ಎ ಕ್ಯಾಟರ್ಸ್​​ ಸಾಕ್ಷಿ. ಕೆ.ಎಮ್​.ಎ ಕ್ಯಾಟರ್ಸ್ ಮಾಲೀಕರಾದ ಖದೀರ್​ ಅಹಮ್ಮದ್, ಟೆಂಡರು ನಿಯಮಗಳನ್ನ ಸಂಪೂರ್ಣವಾಗಿ ಗಾಳಿಗೆ ತೂರಿ ಸಿಕ್ಕ ಸಿಕ್ಕ ಗುತ್ತಿಗೆಯನ್ನ ಕಂಡಕಂಡವರಿಗೆ ಅಕ್ರಮವಾಗಿ ಲಕ್ಷಾಂತರ ರೂಪಾಯಿಗೆ ಮಾರಿ ಉಪಗುತ್ತಿಗೆ ನೀಡಿದ್ದಾರೆ.
ಈ ಉಪಗುತ್ತಿಗೆದಾರರೋ ಲಾಭದಾಸೆಗೆ ಅತ್ಯಂತ ಕೊಳಕಾಗಿ, ಕೆಟ್ಟದಾಗಿ, ಕಳಪೆ ಆಹಾರ ಪದಾರ್ಥ ಉಪಯೋಗಿಸಿ ಜನರಿಗೆ ಆಹಾರ ಪೂರೈಸುತ್ತಿದ್ದಾರೆ. ಇದು ನಮ್ಮ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡದ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.
ಟೆಂಡರುದಾರರು ರೈಲು ಪ್ರಯಾಣಿಕರಿಗೆ ಕೆಟ್ಟ, ಕೊಳಕು, ವಿಷ ಆಹಾರ ಸರಬರಾಜು ಮಾಡುತ್ತಿರೋದು ರೈಲ್ವೇ ಅಧಿಕಾರಿಗಳಿಗೆ ಗೊತ್ತಿಲ್ವಾ? ಅವರು ಯಾಕೆ ಮೌನವಹಿಸಿದ್ದಾರೆ? ಈ ಪ್ರಶ್ನೆಗೆ ಉತ್ತರ ಪಡೆಯಲು ನಾವು ಟೆಂಡರುದಾರರ ಬಳಿ ವೇಷ ಮರೆಸಿ ಹೋಗಿ ಬಾಯ್ಬಿಡಿಸಿದಾಗ ಗೊತ್ತಾದ ಸತ್ಯ ಲಂಚದ ಅವ್ಯವಹಾರ.
ಟೆಂಡರುದಾರರು ಬೇಕಾಬಿಟ್ಟಿ ವ್ಯವಹಾರ ಮಾಡಲು ರೈಲ್ವೇ ಅಧಿಕಾರಿಗಳಿಂದ ಹಿಡಿದು, ರೈಲ್ವೇ ಪೊಲೀಸರು, ಟಿಟಿಗಳವರೆಗೆ ಪ್ರತಿಯೊಬ್ಬರಿಗೂ ಲಂಚ ಕೊಡಲೇ ಬೇಕಂತೆ. ಕೊಡದಿದ್ದರೆ ಗೇಟ್​ ಪಾಸ್​ ಕೊಡ್ತಾರಂತೆ. ಪ್ರತಿ ತಿಂಗಳು ಲಕ್ಷಗಟ್ಟಲೆ ಲಂಚಕೊಟ್ರೆ ಪಾಸ್​, ಮೆಡಿಕಲ್​, ಪೊಲೀಸ್ ಸರ್ಟಿಫಿಕೇಟ್​ ಇಲ್ಲದೆಯೂ ರೈಲಲ್ಲಿ ಆಹಾರ ಮಾರಬಹುದುದಂತೆ. ಈ ಸತ್ಯ ನಮ್ಮ ರಿಯಾಲಿಟಿ ಚೆಕ್​ನಲ್ಲೂ ಬಯಲಾಯ್ತು.
ಹೇಗಿದೆ ನೋಡಿ ರೈಲ್ವೇ ಇಲಾಖೆಯ ವಿಷ ಆಹಾರ ಮಾಫಿಯಾದ ಕಾರುಬಾರು. ಈ ಹಗರಣವನ್ನ ಗಂಭೀರವಾಗಿ ಪರಿಗಣಿಸಿ ಕೇಂದ್ರ ರೈಲ್ವೇ ಸಚಿವ ಸುರೇಶ್​ ಪ್ರಭು ತನಿಖೆಗೆ ಆದೇಶ ನೀಡಬೇಕು. ಇಲ್ಲದಿದ್ದರೆ ಪ್ರಯಾಣಿಕರಿಗೆ ಅಪಾಯ ತಪ್ಪಿದ್ದಲ್ಲ.

Comments are closed.