ಕರ್ನಾಟಕ

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್’ಮಟ್ಟು ರಾಜಕೀಯಕ್ಕೆ?

Pinterest LinkedIn Tumblr


ಏನಿದು ಬೆಳವಣಿಗೆ?
* ಹಾಲಿ ಕಾಂಗ್ರೆಸ್‌ ಶಾಸಕ ಅಭಯಚಂದ್ರ ಜೈನ್‌ ಪ್ರತಿನಿಧಿಸುತ್ತಿರುವ ಕ್ಷೇತ್ರ
* ಇತ್ತೀಚೆಗೆ ತಾನಿನ್ನು ಸ್ಪರ್ಧಿಸುವುದಿಲ್ಲ ಎಂದು ಸಿಎಂಗೆ ಹೇಳಿದ್ದ ಅಭಯ್‌
* ತನ್ನ ಬದಲು ಮಿಥುನ್‌ ರೈ ಎಂಬವರಿಗೆ ಟಿಕೆಟ್‌ ಕೋರಿದ್ದ ಕಾಂಗ್ರೆಸ್ಸಿಗ
* ಈ ಹಿನ್ನೆಲೆಯಲ್ಲಿ ಅಮೀನ್‌ಗೆ ಟಿಕೆಟ್‌ ನೀಡಲು ಬೆಂಬಲಿಗರ ಒತ್ತಡ
* ಇದರ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಅಮೀನ್‌ಮಟ್ಟು ಸಕ್ರಿಯ
ಬೆಂಗಳೂರು: ಅಂಕಣಕಾರ, ರಾಜಕೀಯ ವಿಶ್ಲೇಷಕ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿರುವ ದಿನೇಶ್‌ ಅಮೀನ್‌ಮಟ್ಟು ಅವರು ಶೀಘ್ರವೇ ಸಕ್ರಿಯ ಚುನಾವಣಾ ರಾಜಕಾರಣಕ್ಕೆ ದಾಪುಗಾಲು ಹಾಕುವ ಖಚಿತ ಲಕ್ಷಣಗಳಿವೆ.
ತಮ್ಮ ಪ್ರಗತಿಪರ ಚಿಂತನೆ ಹಾಗೂ ಅದರ ದಿಟ್ಟಪ್ರತಿಪಾದನೆಗೆ ಖ್ಯಾತರಾಗಿರುವ ದಿನೇಶ್‌ ಅಮೀನ್‌ಮಟ್ಟು ಅವರಿಗೆ 2018ರ ವಿಧಾನಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ದೊರಕಿಸಿಕೊಡುವ ಪ್ರಯತ್ನಗಳು ತೆರೆ ಮರೆಯಲ್ಲಿ ಆರಂಭಗೊಂಡಿವೆ. ಮಟ್ಟು ಅವರ ಆತ್ಮೀಯರು ಹಾಗೂ ಅವರ ಅಭಿಮಾನಿ ಬಳಗ ಮಟ್ಟು ಅವರಿಗೆ ಮೂಡುಬಿದಿರೆ ಕ್ಷೇತ್ರದ ಟಿಕೆಟ್‌ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದಿದೆ. ಈ ಒತ್ತಡಕ್ಕೆ ಸಂಪೂರ್ಣವಾಗಿ ಮಣಿಯ​ದಿದ್ದರೂ, ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ​ಯವರು ಕ್ಷೇತ್ರದ ನಾಡಿಮಿಡಿತ ಅರ್ಥ​ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮವಾಗಿ ದಿನೇಶ್‌ ಅಮೀನ್‌ಮಟ್ಟು ಅವರು ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಮೂಡಬಿದಿರೆ ಕ್ಷೇತ್ರದ ಆಗುಹೋಗುಗಳಲ್ಲಿ ಹೆಚ್ಚಿನ ಆಸ್ಥೆ ವಹಿಸುತ್ತಿದ್ದು, ಸ್ಥಳೀಯ ಹೋರಾಟ ಹಾಗೂ ಸಮಾರಂಭಗಳಲ್ಲಿ ಸಕ್ರಿಯ​ವಾಗಿ ಪಾಲ್ಗೊಳ್ಳತೊಡಗಿ​ದ್ದಾರೆ. ಕುತೂಹಲಕಾರಿ ಸಂಗತಿ​ಯೆಂದರೆ, ಹಾಲಿ ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರ ಕ್ಷೇತ್ರವಾದ ಮೂಡಬಿದಿರೆ ಕ್ಷೇತ್ರದಲ್ಲಿ ಅಮೀನ್‌ಮಟ್ಟು ಅವರ ಪ್ರವೇಶ ಕೊಡಿಸುವ ಪ್ರಯತ್ನಕ್ಕೆ ಪರೋ​ಕ್ಷ​ವಾಗಿ ಕಾರಣವಾಗಿ​ರುವವರು ಖುದ್ದು ಶಾಸಕ ಅಭಯಚಂದ್ರ ಜೈನ್‌! ಇತ್ತೀಚೆಗೆ ಕೆಪಿಸಿಸಿಯು ಮಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಅಭಯಚಂದ್ರ ಜೈನ್‌ ಅವರು ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಬದಲಾಗಿ ಕ್ಷೇತ್ರದ ಟಿಕೆಟ್‌ ಅನ್ನು ತಮ್ಮ ಆಪ್ತ ಹಾಗೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಮಿಥುನ್‌ ರೈ ಎಂಬ ಯುವ ಮುಖಂಡರಿಗೆ ನೀಡುವಂತೆ ಕೋರಿದ್ದರು ಎನ್ನಲಾಗಿದೆ.
ಆದರೆ, ಜಿಲ್ಲೆಯಲ್ಲಿ ಈಗಾಗಲೇ ಬಂಟ್‌ ಸಮುದಾಯಕ್ಕೆ ಸೇರಿದ ಇಬ್ಬರು (ಸಚಿವ ರಮಾನಾಥರೈ ಹಾಗೂ ಶಕುಂತಲಾ ಶೆಟ್ಟಿ) ಇರುವ ಕಾರಣ ಅದೇ ಸಮುದಾಯಕ್ಕೆ ಸೇರಿದ ಅಮಿತ್‌ ರೈ ಅವರಿಗೆ ಟಿಕೆಟ್‌ ನೀಡುವುದು ಅಷ್ಟುಸುಲಭವಲ್ಲ. ಈ ಹಿನ್ನೆಲೆಯಲ್ಲಿ ಅಮೀನ್‌ಮಟ್ಟು ಅವರ ಆತ್ಮೀಯ ಬಳಗವೂ ಮೂಲತಃ ಮೂಡಬಿದಿರೆ ಕ್ಷೇತ್ರದವರಾದ ದಿನೇಶ್‌ ಅಮೀನ್‌ ಮಟ್ಟು ಅವರಿಗೆ ಟಿಕೆಟ್‌ ನೀಡುವಂತೆ ಸಿಎಂ ಮುಂದೆ ಒತ್ತಾಯ ಮಂಡಿಸಿದೆ.
ಇದಕ್ಕೆ ಅಮೀನ್‌ಮಟ್ಟು ಅವರ ಆತ್ಮೀಯರು, ಮೂಡಬಿದಿರೆ ಕ್ಷೇತ್ರದಲ್ಲಿ ದಿನೇಶ್‌ ಅವರ ಸಮುದಾಯವಾದ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ, ಮುಸ್ಲಿಂ ಸಮುದಾಯವೂ ದೊಡ್ಡ ಪ್ರಮಾಣದಲ್ಲಿದೆ. ಈ ಎರಡು ಸಮುದಾಯಗಳ ಬೆಂಬಲ ಪ್ರಗತಿಪರ ಧೋರಣೆಯ ಅಮೀನ್‌ಮಟ್ಟು ಅವರಿಗೆ ದೊರಕುವಂತೆ ಮಾಡುವುದು ಕಷ್ಟವಲ್ಲ. ಹೀಗಾಗಿ ಅವರನ್ನು ಪರಿಗಣಿಸುವಂತೆ ವಾದ ಮಂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅಮೀನ್‌ಮಟ್ಟು ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಇದಕ್ಕೆ ಮಾಧ್ಯಮ ಸಲಹೆಗಾರರಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿಯವರ ಇಮೇಜ್‌ ವೃದ್ಧಿಗೆ ಅಮೀನ್‌ಮಟ್ಟು ವಹಿಸಿರುವ ಆಸಕ್ತಿ ಮತ್ತು ಜನಾರ್ದನ ಪೂಜಾರಿಯಂತಹ ಹಿರಿಯ ಮುಖಂಡರು ಸಿಎಂ ವಿರುದ್ಧ ನಡೆಸುವ ದಾಳಿಗೆ ತಡೆಗೋಡೆಯ ಪಾತ್ರ ನಿರ್ವಹಿಸಿರುವುದು ಕೂಡ ಕಾರಣ.
ಪ್ರತಿಪಕ್ಷಗಳಿಂದ ಸರ್ಕಾರ ಹಾಗೂ ಮುಖ್ಯಮಂತ್ರಿಯವರ ವಿರುದ್ಧ ಟೀಕೆ ವ್ಯಕ್ತವಾದಾಗ ನೇರವಾಗಿ ಅಖಾಡಕ್ಕೆ ಇಳಿಯುತ್ತಿದ್ದ ಅಮೀನ್‌ಮಟ್ಟು ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉದಾಹರಣೆಗಳು ಇವೆ. ಇದರಿಂದಾಗಿ ಬಿಜೆಪಿಯ ಮಾಜಿ ಸಚಿವ ಸಿ.ಟಿ. ರವಿ ಅವರು, ಮಾಧ್ಯಮ ಸಲಹೆಗಾರ ಹುದ್ದೆಯಲ್ಲಿದ್ದು ರಾಜಕೀಯ ಮಾಡುವ ಬದಲು ಹುದ್ದೆ ತ್ಯಜಿಸಿ ರಾಜಕೀಯ ಸೇರುವಂತೆ ಅಮೀನ್‌ಮಟ್ಟು ಅವರಿಗೆ ಸವಾಲು ಸಹ ಹಾಕಿದ್ದರು.
ನನ್ನ ರಾಜಕೀಯ ಪ್ರವೇಶದ ಬಗ್ಗೆ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ. ವೈಯಕ್ತಿಕವಾಗಿ ನಾನು ಈ ಬಗ್ಗೆ ಚಿಂತಿಸಿಲ್ಲ. ಆದರೆ, ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಅಲ್ಲಲ್ಲಿ ಊಹಾಪೋಹಗಳಿವೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.
– ದಿನೇಶ್‌ ಅಮೀನ್‌ಮಟ್ಟು, ಸಿಎಂ ಮಾಧ್ಯಮ ಸಲಹೆಗಾರ

Comments are closed.