ಕರ್ನಾಟಕ

ವಸತಿ ಸಮುಚ್ಛಯಗಳಲ್ಲಿ ದೊಡ್ಡ ಗಾತ್ರದ ನಾಯಿ ಸಾಕಣೆಗೆ ಬಿಬಿಎಂಪಿಯಿಂದ ಕಡಿವಾಣ

Pinterest LinkedIn Tumblr


ಬೆಂಗಳೂರು: ಬೆಂಗಳೂರು ನಗರದ ವಸತಿ ಸಮುಚ್ಛಯಗಳಲ್ಲಿ ವಾಸಿಸುವರು ಇನ್ನು ಮುಂದೆ ದೊಡ್ಡ ಗಾತ್ರದ ನಾಯಿಗಳನ್ನು ಸಾಕುವಂತಿಲ್ಲ! ಹೀಗೊಂದು ನಿಯಮವನ್ನು ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ನಗರದ ವಸತಿ ಸಮುಚ್ಛಯ (ಅಪಾರ್ಟ್‍ಮೆಂಟ್‍)ನಲ್ಲಿ ದೊಡ್ಡ ಗಾತ್ರದ ನಾಯಿಗಳ ಸಾಕಣೆಗೆ ನಿಷೇಧ ಹೇರುವ ಪ್ರಸ್ತಾಪ ಬಿಬಿಎಂಪಿ ಮುಂದಿದೆ. ಅದೇ ವೇಳೆ ಯಾವ ಯಾವ ಸಾಕುಪ್ರಾಣಿಗಳನ್ನು ಎಷ್ಟೆಷ್ಟು ಸಾಕಬಹುದು? ಎಂಬುದರ ಬಗ್ಗೆಯೂ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಬಿಬಿಎಂಪಿ ನಿಯಮಗಳ ಕರಡುಪ್ರತಿಯಲ್ಲಿ ಈ ಎಲ್ಲ ವಿಷಯಗಳ ಉಲ್ಲೇಖವಿದೆ ಎಂದ ದ ನ್ಯೂಸ್ ಮಿನಿಟ್ ಡಾಟ್ ಕಾಂ ವರದಿ ಮಾಡಿದೆ.

ಜರ್ಮನ್ ಶೆಫರ್ಡ್, ಇಂಗ್ಲಿಷ್ ಮಸ್ಟಿಫ್ಸ್, ಅಲಸ್ಕನ್ ಮಲಾಮೂಟ್, ಗೋಲ್ಡನ್ ರಿಟ್ರೈವರ್, ರೋಟ್‍ವೆಲರ್, ಗ್ರೇಟ್ ಡೇನ್ಸ್, ಸೇಂಟ್ ಬರ್ನಾಡ್ ಮೊದಲಾದ ದೊಡ್ಡ ಗಾತ್ರದ ನಾಯಿ ತಳಿಗಳನ್ನು ವಸತಿ ಸಮುಚ್ಛಯಗಳಲ್ಲಿ ಸಾಕುವುದನ್ನು ನಿಷೇಧಿಸುವ ಬಗ್ಗೆ ಬಿಬಿಎಂಪಿ ಪಶು ಸಂಗೋಪನೆ ಇಲಾಖೆ ಚಿಂತನೆ ನಡೆಸಿದೆ.

ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಅಪಾರ್ಟ್‍ಮೆಂಟ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಪುಟ್ಟ ನಾಯಿಗಳನ್ನು ಸಾಕುವುದಕ್ಕೂ ನಿರ್ಬಂಧ ವಿಧಿಸಲಾಗುವುದು.

ಬಿಬಿಎಂಪಿಯ ಈ ಚಿಂತನೆ ಬಗ್ಗೆ ಶ್ವಾನಪ್ರಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೀದಿನಾಯಿಗಳ ಸಂಖ್ಯೆ ಹೆಚ್ಚಾದಾಗ ಅದನ್ನು ನಿಯಂತ್ರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಈಗ ನಾವು ನಮ್ಮ ಮನೆಯಲ್ಲಿ ಎಷ್ಟು ನಾಯಿಗಳನ್ನು ಸಾಕಬೇಕು ಎಂಬುದರ ಬಗ್ಗೆ ನಿರ್ಧರಿಸಲು ಅವರ್ಯಾರು? ಅಂತಾರೆ ಬಿಳೇಕಹಳ್ಳಿ ನಿವಾಸಿ ಸುಪ್ರಿಯಾ ರಾಮಸ್ವಾಮಿ. ಸುಪ್ರಿಯಾ ಅವರ ಮನೆಯಲ್ಲಿ ಜರ್ಮನ್ ಶೆಫರ್ಡ್ ಮತ್ತು ಗೋಲ್ಡಲ್ ರಿಟ್ರೈವರ್ ನಾಯಿಗಳಿವೆ.

ಈ ಹೊಸ ನಿಯಮದಿಂದಾಗಿ ಅಪಾರ್ಟ್‍ಮೆಂಟ್‍ ನಿವಾಸಿಗಳಿಗೆ ಹೆಚ್ಚು ಹೊಡೆತ ಬೀಳಲಿದೆ. ಸ್ವತಂತ್ರ ಮನೆಯಲ್ಲಿ ವಾಸಿಸುವರು ಮೂರು ನಾಯಿಗಳನ್ನು ಸಾಕಬಹುದಾಗಿದೆ.

ಈ ನಿಯಮ ಜಾರಿಗೆ ಬಂದರೆ ಈಗಾಗಲೇ ದೊಡ್ಡ ಗಾತ್ರದ ನಾಯಿಗಳನ್ನು ಹೊಂದಿರುವವರು ಅಪಾರ್ಟ್‍ಮೆಂಟ್ ಬಿಟ್ಟು ಬೇರೆ ಮನೆಗೆ ಹೋಗಲೇ ಬೇಕಾಗುತ್ತದೆ. ಅವರಿಷ್ಟ ಪಡುವ ನಾಯಿಗಳನ್ನು ಅವರು ಬಿಟ್ಟು ಕೊಡುವುದಿಲ್ಲ. ಹಾಗಾಗಿ ಅವರು ಬೇರೊಂದು ಮನೆಗೆ ಹೋಗಲೇ ಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಬಿಬಿಎಂಪಿ ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಆನಂದ್ ಹೇಳಿದ್ದಾರೆ.

Comments are closed.