ಕರ್ನಾಟಕ

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಸಂದಿಗ್ದದಲ್ಲಿ ವಿ.ಸೋಮಣ್ಣ

Pinterest LinkedIn Tumblr


ಬೆಂಗಳೂರು, ಜ. ೨೦- ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ವಿ. ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರೂ, ಕಾಂಗ್ರೆಸ್ ಸೇರುವ ಬಗ್ಗೆ ವಿ. ಸೋಮಣ್ಣ, ತುಟಿಕ್ ಪಿಟಿಕ್ ಎನ್ನದೆ ಮೌನವಾಗಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಮಾಜಿ ಸಚಿವ ವಿ. ಸೋಮಣ್ಣನವರಿಗೆ ಗಾಳ ಹಾಕಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಹಳೇ ಮೈಸೂರು ಭಾಗದ ಪ್ರಭಾವಿ ಮುಖಂ‌ಡ‌ರಾಗಿ ಲಿಂಗಾಯಿತ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಚಿವ ಮಹದೇವ ಪ್ರಸಾದ್‌ರವರ ಅಕಾಲಿಕ ನಿಧನ ನಂತರ ಲಿಂಗಾಯಿತ ನಾಯಕರ ಕೊರತೆ ತುಂಬಲು ವಿ. ಸೋಮಣ್ಣನವರನ್ನು ಕಾಂಗ್ರೆಸ್‌ಗೆ ಕರೆತರಲು ಕಾಂಗ್ರೆಸ್ ಕೆಲ ಮುಖಂಡರು ತೆರೆಮರೆಯ ಪ್ರಯತ್ನ ನ‌ಡೆಸಿದ್ದಾರೆ.
ಬಿಜೆಪಿಯಲ್ಲಿ ಕೆಲ ಮುಖಂಡರ ವರ್ತನೆಯಿಂದ ಸೋಮಣ್ಣ ಬೇಸರಗೊಂಡಿರುವುದನ್ನು ಬಂಡವಾಳ ಮಾ‌ಡಿಕೊಂಡು ಸೋಮಣ್ಣನವರನ್ನು ಕಾಂಗ್ರೆಸ್‌ಗೆ ಸೆಳೆದು, ನಂಜನಗೂಡು ಹಾಗೂ ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿ ನಿರ್ಣಾಯಕವಾಗಿರುವ ಲಿಂಗಾಯಿತರನ್ನು ಸಂಘಟಿಸಿ ಗೆಲುವು ಸಾಧಿಸುವ ಲೆಕ್ಕಚಾರ ಮುಖಂಡರದ್ದಾಗಿದೆ.ಕಾಂಗ್ರೆಸ್‌ಗೆ ಬಂದರೆ ಸಚಿವ ಹುದ್ದೆ ನೀಡುವ ಭರವಸೆಯನ್ನು ಸೋಮಣ್ಣನವರಿಗೆ ನೀ‌ಡಲಾಗಿದೆ ಎನ್ನಲಾಗಿದೆ.
ಗೊಂದಲದಲ್ಲಿ ಸೋಮಣ್ಣ
ಕಾಂಗ್ರೆಸ್ ಮುಖಂಡರ ಪಕ್ಷ ಸೇರುವ ಆಹ್ವಾನದ ಬಗ್ಗೆ ವಿ. ಸೋಮಣ್ಣ ಖಚಿತ ತೀರ್ಮಾನ ಕೈಗೊಳ್ಳಲಾಗದೆ ಗೊಂದಲದಲ್ಲಿದ್ದಾರೆ. ಕಷ್ಟ ಕಾಲದಲ್ಲಿ `ಆಸರೆ’ ನೀಡಿದ ಯಡಿಯೂರಪ್ಪನವರನ್ನು ತೊರೆದು ಹೋದರೆ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯ ಹಾಗೂ ಮಠಾಧೀಶರ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ ಎಂದು ಅರಿತಿರುವ ಸೋಮಣ್ಣ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.
ಈ ಹಿಂದೆ ಸೋಮಣ್ಣ ಯಡಿಯೂರಪ್ಪನವರ ಬಗ್ಗೆ ಬಹಿರಂಗವಾಗಿ ಮಾತನಾಡಿ, ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್‌ನ ನೆರವಿಗೆ ನಿಂತಾಗ ಲಿಂಗಾಯತ ಸ್ವಾಮೀಜಿಗಳು ಸೋಮಣ್ಣನವರಿಗೆ `ತಿಳಿ’ ಹೇಳಿ ಯಡಿಯೂರಪ್ಪ ವಿರೋಧ ರಾಜಕಾರಣವನ್ನು ಪೋಷಿಸದಂತೆ ತಾಕೀತು ಮಾಡಿದ್ದರು. ಈ ಬೆಳವಣಿಗೆಗಳು ವಿ. ಸೋಮಣ್ಣರವರನ್ನು ವಿಚಲಿತರನ್ನಾಗಿ ಬೇರೆ ಪಕ್ಷದ ಕಡೆ ಮುಖ ಮಾಡುವ ಮನಸ್ಸು ಮಾಡಿದ್ದರಾದರೂ ವಿಜಯನಗರ ಹಾಗೂ ಗೋವಿಂದ ರಾಜನಗರ ಕ್ಷೇತ್ರದ ತಮ್ಮ ಬೆಂಬಲಿಗರ ನಗರಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡದಿಂದ ಬಿಜೆಪಿ ಬಿಡುವ ತೀರ್ಮಾನ ಕೈಬಿಟ್ಟಿದ್ದರು. ಈಗ ಕಾಂಗ್ರೆಸ್ ಪಕ್ಷದಿಂದಲೇ ಆಹ್ವಾನ ಬಂದಿರುವುದು, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ತಮ್ಮ `ಕೈ’ ಹಿಡಿಯಲು
ಮುಂದಾಗಿರುವುದರಿಂದ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ವಿ. ಸೋಮಣ್ಣ ಕಾಂಗ್ರೆಸ್‌ಗೆ ಹೋದರೆ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳ ಮೇಲೆ ಇರುವ ಹಿಡಿತ
`ಕೈ’ ತಪ್ಪಲಿದೆ, ಚಾಮರಾಜನಗರ ಜಿಲ್ಲೆಗೆ ಹೋಗಿ ರಾಜಕಾರಣ ಮಾಡಿದರೆ, ನಮ್ಮಗತಿ ಏನು ಎಂದು ಈ ಎರಡೂ ಕ್ಷೇತ್ರಗಳ ಬಿಜೆಪಿ ನಗರಪಾಲಿಕೆ ಸದಸ್ಯರು ಅಲವತ್ತು ಗೊಂಡಿರುವುದು ಸೋಮಣ್ಣನವರಿಗೆ ಯಾವುದೇ ನಿರ್ಧಾರ ಸೈಗೊಳ್ಳಲು ಸಾಧ್ಯವಾಗಿಲ್ಲ. ಪದೇ ಪದೇ ಪಕ್ಷ ಬಿಡುವುದು ಒಳ್ಳೆಯದಲ್ಲ ಎಂದು ಆಪ್ತರು ಕಿವಿಮಾತು ಸಹ ಸೋಮಣ್ಣನವರಿಗೆ ಪಕ್ಷ ಬಿಡುವ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.
ವರಿಷ್ಠರ ಸಂದೇಶ
ಮಾಜಿ ಸಚಿವ ವಿ. ಸೋಮಣ್ಣ, ಪಕ್ಷ ಬಿಡುತ್ತಾರೆ ಎಂಬ ಸಂದೇಶ ಸಿಕ್ಕ ತಕ್ಷಣವೇ ವರಿಷ್ಠರು ಸೋಮಣ್ಣನವರಿಗೆ ದುಡುಕಿನ ತೀರ್ಮಾನ ಬೇಡ. ಯಡಿಯೂರಪ್ಪನವರ ಜೊತೆ ಇರಿ. ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್‌ರವರಿಗೆ ಸೋಮಣ್ಣನವರ ಜೊತೆ ಮಾತನಾ‌ಡುವಂತೆ ಹೇಳಿದೆ. ಅದರಂತೆ ಆರ್. ಅಶೋಕ್ ಇಂದು ಸೋಮಣ್ಣನವರ ಜೊತೆ ಚರ್ಚಿಸಲಿದ್ದಾರೆ.
ಮಾಜಿ ಸಚಿವ ವಿ. ಸೋಮಣ್ಣನವರಿಗೆ ಯಡಿಯೂರಪ್ಪನವರ ಮೇಲೆ ಸಿಟ್ಟಿಲ್ಲ. ಸಿಟ್ಟಿರುವುದು ಅವರ ಜೊತೆ ಇರುವ ಕೆಲ ಮುಖಂಡರ ಮೇಲೆ ಮಾತ್ರ. ಹಾಗಾಗಿ ಸದ್ಯದಲ್ಲೇ ಎಲ್ಲವು ಬಗೆಹರಿಯಲಿದ್ದು, ಸೋಮಣ್ಣ ಬಿಜೆಪಿಯಲ್ಲೇ ಉಳಿಯುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಯಡಿಯೂರಪ್ಪನವರ ಆಪ್ತ ಮೂಲಗಳ ಹೇಳಿಕೆ.
ಮಾಜಿ ಸಚಿವ ಸೋಮಣ್ಣ ಬಿಜೆಪಿಯಲ್ಲೇ ಉಳಿಯುತ್ತಾರೋ, ಅಥವಾ ಕಾಂಗ್ರೆಸ್ ಸೇರುತ್ತಾರೋ ಎಂಬೆಲ್ಲಾ ಸುದ್ದಿಗಳಿಗೆ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಉತ್ತರಗಳು ಸಿಗಲಿವೆ.

Comments are closed.