ಕರ್ನಾಟಕ

ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಡಲು ದಲಿತರು, ಪ್ರಗತಿಪರರು ಕನಿಷ್ಠ ಕಾರ್ಯಕ್ರಮ ರೂಪಿಸಬೇಕು: ಕನ್ಹಯ್ಯಕುಮಾರ್

Pinterest LinkedIn Tumblr


ಬೆಂಗಳೂರು, ಜ. ೨೦- ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಡಲು ದಲಿತರು, ಪ್ರಗತಿಪರರು, ಹಿಂದುಳಿದವರು, ಅಲ್ಪಸಂಖ್ಯಾತರು, ಒಟ್ಟಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ವರ್ಗಗಳು ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನ 15ನೇ ರಾಜ್ಯಸಮ್ಮೇಳನದಲ್ಲಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಮತ್ತು ಪ್ರಗತಿಪರರ ನಡುವೆ ಅಂತರ ಹೆಚ್ಚಾಗುತ್ತಿದೆ. ಈ ಎರಡೂ ವರ್ಗಗಳು ಒಗ್ಗಟ್ಟಾಗಿ ಸಾಮಾನ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯಬೇಕಾದ ಜರೂರು ಈಗ ಅನಿವಾರ್ಯವಾಗಿದೆ. ನಮ್ಮೊಳಗಿನ ಭಿನ್ನತೆ, ಸ್ವಪ್ರತಿಷ್ಠೆಗಳಿಂದಾಗಿ ನಾವು ಅಧಿಕಾರ ಕಳೆದುಕೊಂಡು ಸುಲಿಯಲ್ಪಡುತ್ತಿದ್ದೇವೆ. ನಮ್ಮ ಹೋರಾಟದ ನೆಲೆಯನ್ನು ವಿಸ್ತರಿಸಿಕೊಳ್ಳಬೇಕಾದರೆ ಒಗ್ಗಟ್ಟೇ ನಮ್ಮ ಮುಂದಿರುವ ಏಕೈಕ ಪರಿಹಾರ ಎಂದು ಹೇಳಿದರು.
ಪ್ರಜಾಪ್ರಭುತ್ವಕ್ಕೆ ಬಂಡವಾಳಶಾಹಿ ಮತ್ತು ಬ್ರಾಹ್ಮಣ ವಾದ ಅಪಾಯಕಾರಿ. ಇವೆರಡನ್ನು ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ ಅವರು, ಮಲ್ಯ, ಬಿರ್ಲಾ, ಅಂಬಾನಿ, ಹಾಜಾನಿ ಮುಂತಾದ ಉದ್ಯಮಿಗಳು ಲಾಭ ಮಾಡಿಕೊಂಡಾಗ ಆ ಲಾಭ ಅವರ ವೈಯಕ್ತಿಕ ಖಾತೆಗೆ ಹೋಗುತ್ತದೆ. ಆದರೆ ಅವರು ನಷ್ಟ ಹೊಂದಿದಾಗ ಆ ನಷ್ಟ ಸಮಾಜದ ಮೇಲೆ ಹೊರಿಸಲಾಗುತ್ತದೆ. ಇಂತಹ ವ್ಯವಸ್ಥೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಕನ್ಹಯ್ಯಕುಮಾರ್, ಪ್ರಧಾನಿಯವರಿಗೆ ವಾಸ್ಕೋಡಿಗಾಮನಂತೆ ದೇಶ ಸುತ್ತಲು, 5 ಲಕ್ಷದ ಕೋಟು ಧರಿಸಲು ಹಣವಿದೆ. ಆದರೆ, ಶಿಕ್ಷಣ ಕ್ಷೇತ್ರದ ಪ್ರಗತಿಗೆ ನೀಡಲು ಹಣ ಇಲ್ಲ. ಮನ್ ಕೀ ಬಾತ್‌ನಲ್ಲಿ ಮಾತನಾಡುವ ಪ್ರಧಾನಿಯವರಿಗೆ ಜನರಕಷ್ಟ ಕೇಳಲು ಸಮಯವಿಲ್ಲ. ಆರ್‌ಬಿಐ ಗೌಱ್ನರ್, ಪತ್ರಕರ್ತರನ್ನು ಕಂಡಾಗ ಪಿ.ಟಿ ಉಷಾ ಮಾದರಿಯಲ್ಲಿ ಓಟಕ್ಕೀಳುತ್ತಾರೆ.
ನೋಟು ಅಮಾನ್ಯ ನಿರ್ಧಾರದಿಂದ ಎಷ್ಟು ಕೋಟಿ ಕಪ್ಪು ಹಣ ಬಂದಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ ಅವರು, ನೋಟು ಬದಲಾಯಿಸಿಕೊಳ್ಳಲು ಬ್ಯಾಂಕಿನ ಮುಂದೆ ಸರತಿ ಸಾಲು ನಿಂತಾಗ 100ಕ್ಕೂ ಅಧಿಕ ಬಡವರು ಸಾವಿಗೀಡಾಗಿದ್ದಾರೆ. ಇದರ ಬಗ್ಗೆ ಪ್ರಧಾನಿಯವರಿಗೆ ಕಾಳಜಿ ಇಲ್ಲ. ಫೋಟೋ ತೆಗೆಸಿಕೊಳ್ಳುವುದರಲ್ಲೇ ಅವರು ಮಗ್ನರಾಗಿದ್ದಾರೆ ಎಂದು ಟೀಕಿಸಿದರು.
ಚಿಂತಕ ಜಿ. ರಾಮಕೃಷ್ಣ ಮಾತನಾಡಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರೂಪಿಸಿರುವ ಪಠ್ಯಕ್ರಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಎಐಎಸ್‌ಎಫ್ ಪ್ರಧಾನ ಕಾರ್ಯದರ್ಶಿ ವಿಶ್ವಜಿತ್ ಕುಮಾರ್, ಮಾಜಿಸಂಸದ ಅಜೀಮ್ ಪಾಷ, ಲೇಖಕಿ ಡಾ. ವಸುಂಧರಾ ಭೂಪತಿ, ಸಿಪಿಐ ರಾಜ್ಯಕಾರ್ಯದರ್ಶಿ ಟಿ.ವಿ ಲೋಕೇಶ್, ಎಐಎಸ್‌ಎಫ್ ಮಾಜಿ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್, ರಾಜ್ಯ ಸಂಚಾಲಕ ಹೆಚ್.ಎಂ. ಸಂತೋಷ್, ತಿರುಮಲೈ, ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Comments are closed.