ಕರ್ನಾಟಕ

ಯಡಿಯೂರಪ್ಪ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ

Pinterest LinkedIn Tumblr


ಬೆಂಗಳೂರು, ಜ. ೧೭- ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪರವರ ನಡುವೆ ಸಂಘರ್ಷ ತಾರಕಕ್ಕೇರಿರುವಾಗಲೇ, ಈ ಇಬ್ಬರು ನಾಯಕರ ತವರು ಜಿಲ್ಲೆ ಶಿವಮೊಗ್ಗದಲ್ಲೂ ಬಣ ಸಂಘರ್ಷ ನಡೆದಿದ್ದು, ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎರಡೂ ಬಣಗಳ ನಾಯಕರುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರ ಸಮ್ಮುಖದಲ್ಲೇ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ನಿನ್ನೆ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಈಶ್ವರಪ್ಪ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಯಡಿಯೂರಪ್ಪ ಬಣ ನಾಯಕರ ಒತ್ತಾಯ ನಾಯಕರುಗಳ ಮಾತಿನ ಚಕಮಕಿಗೆ ಕಾರಣವಾಯಿತು.
ಪತ್ರಿಕಾಗೋಷ್ಠಿಯಲ್ಲಿ ಗೂಂಡಾ ವರ್ತನೆ ತೋರಿರುವ ಈಶ್ವರಪ್ಪ ಬೆಂಬಲಿಗರಾದ ದತ್ತಾತ್ರಿ, ಚೆನ್ನಬಸಪ್ಪ, ಗಿರೀಶ್ ಪಟೇಲ್ ಇವರುಗಳನ್ನು ಉಚ್ಛಾಟಿಸಬೇಕು ಎಂದು ಬಿಎಸ್‌ವೈ ಬಣದ ಮುಖಂಡ ಪುರುಷೋತ್ತಮ್ ಜಿಲ್ಲಾಧ್ಯಕ್ಷರನ್ನು ಪಕ್ಷದ ಕಚೇರಿಯಲ್ಲಿ ಒತ್ತಾಯಿಸಿದರು. ಇದಕ್ಕೆ ಈಶ್ವರಪ್ಪ ಬಣದ ನಾಯಕರುಗಳು ಪ್ರತಿರೋಧ ವ್ಯಕ್ತಪಡಿಸಿದ್ದು ಮಾತಿನ ಸಂಘರ್ಷಕ್ಕೆ ಕಾರಣವಾಯಿತು.
ಆಯನೂರು ವಾಗ್ದಾಳಿ
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್ ಈಶ್ವರಪ್ಪನವರ ವಿರುದ್ಧ ನೇರ ವಾಗ್ದಾಳಿ ನಡೆಸಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಈಶ್ವರಪ್ಪ ಸ್ವಾರ್ಥ ರಾಜಕಾರಣ ನಡೆಸಿದ್ದಾರೆ. ಜೆಡಿಎಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಅನುಮಾನಗಳಿವೆ ಎಂದು ಆರೋಪಿಸಿದ್ದರು. ಈ ಹೇಳಿಕೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

Comments are closed.