ಕರ್ನಾಟಕ

ವಕೀಲನ ಹತ್ಯೆ: ‘ಹಂತಕ’ನಾಗಲು ಕಿತ್ತಾಡಿದ ತಂದೆ–ಮಗ!

Pinterest LinkedIn Tumblr


ಬೆಂಗಳೂರು: ‘ನಿನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನೀನು ಜೈಲು ಸೇರಿದರೆ, ಅವರನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಹೀಗಾಗಿ, ನಾನೇ ಗುಂಡಿಕ್ಕಿ ಕೊಂದಿದ್ದಾಗಿ ಹೇಳುತ್ತೇನೆ. ಇಲ್ಲಿಂದ ನೀನು ಹೊರಡು….’

ಇದು, ಹೆಸರಘಟ್ಟ ಮುಖ್ಯರಸ್ತೆಯಲ್ಲಿ ವಕೀಲ ಅಮಿತ್ ಅವರನ್ನು ಗುಂಡಿಕ್ಕಿ ಕೊಂದ ಸ್ಥಳದಲ್ಲಿ ರಾಜೇಶ್‌ಗೆ ಅವರ ತಂದೆ ಗೋಪಾಲಕೃಷ್ಣ ಹೇಳಿದ ಮಾತು.

ಪತ್ನಿ ಶ್ರುತಿ ಸುಳ್ಳು ಹೇಳಿ ಅಮಿತ್ ಜತೆಗಿದ್ದ ವಿಷಯ ತಿಳಿದ ರಾಜೇಶ್, ತಂದೆಯೊಂದಿಗೆ ಸ್ಥಳಕ್ಕೆ ತೆರಳಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಆ ನಂತರ ಶ್ರುತಿ ಕೂಡ ಲಾಡ್ಜ್‌ಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾನೇ ಹಂತಕನ ಹಣೆಪಟ್ಟಿ ಕಟ್ಟಿಕೊಳ್ಳುವುದಾಗಿ ಗೋಪಾಲಕೃಷ್ಣ ಮಗನಿಗೆ ಹೇಳಿದ್ದರು. ಆ ಸಲಹೆಯನ್ನು ಒಪ್ಪದ ರಾಜೇಶ್, ಶರಣಾಗುವುದಾಗಿ ಠಾಣೆಯತ್ತ ಹೊರಟಿದ್ದರು. ಮಗನ ಹಿಂದೆಯೇ ತಂದೆ ಕೂಡ ನಡೆದಿದ್ದರು.

‘ತಾನು ಕೊಲೆ ಮಾಡಿದ್ದಾಗಿ ರಾಜೇಶ್ ಹೇಳಿದರೆ, ಇಲ್ಲ ತಾನೇ ಗುಂಡು ಹೊಡೆದೆ ಎಂದು ಅವರ ತಂದೆ ವಾದಿಸುತ್ತಿದ್ದರು. ಅಲ್ಲದೆ, ಸುಮ್ಮನೆ ಕುಳಿತುಕೊಳ್ಳುವಂತೆ ಮಗನಿಗೂ ಪದೇ ಪದೇ ಬೈಯ್ಯುತ್ತಿದ್ದರು. ನಂತರ ಅವರಿಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಆಗ ಗುಂಡು ಹೊಡೆದದ್ದು ರಾಜೇಶ್ ಎಂಬುದು ಖಚಿತವಾಯಿತು’ ಎಂದು ಅಧಿಕಾರಿಗಳು ಹೇಳಿದರು.

ಪತ್ತೆ ಮಾಡಿದ್ದು ಹೇಗೆ: ‘78 ವರ್ಷದ ಗೋಪಾಲಕೃಷ್ಣ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ ಎಂಬ ಅನುಮಾನ ಆರಂಭದಲ್ಲೇ ವ್ಯಕ್ತವಾಯಿತು. ಠಾಣೆಗೆ ಬಂದ ಬೆರಳಚ್ಚು ತಜ್ಞರು, ರಿವಾಲ್ವರ್ ಮೇಲೆ ಮೂಡಿದ್ದ ಬೆರಳಿನ ಅಚ್ಚನ್ನು ಸಂಗ್ರಹಿಸಿಕೊಂಡರು.

ನಂತರ ತಂದೆ–ಮಗನ ಬೆರಳ ಮುದ್ರೆಯನ್ನೂ ಪಡೆದುಕೊಂಡರು. ಅದು ರಾಜೇಶ್ ಅವರ ಮುದ್ರೆಗೆ ಹೋಲಿಕೆಯಾಯಿತು’ ಎಂದು ಅಧಿಕಾರಿಗಳು ವಿವರಿಸಿದರು.

ನಂತರವೂ ಒಪ್ಪಲಿಲ್ಲ: ಬೆರಳಚ್ಚು ತಜ್ಞರ ಹೇಳಿಕೆಯನ್ನೂ ಒಪ್ಪದ ಗೋಪಾಲಕೃಷ್ಣ, ‘ಮಗನ ಸಂಸಾರ ಹಾಳು ಮಾಡುತ್ತಿದ್ದಾನೆ ಎಂದು ನಾನೇ ಆತನನ್ನು ಗುಂಡಿಕ್ಕಿ ಕೊಂದೆ’ ಎಂದು ಹೇಳಿದರು. ಆ ನಂತರ ಪೊಲೀಸರು ಗುಂಡುಗಳಿಲ್ಲದ ರಿವಾಲ್ವರನ್ನು ಅವರ ಕೈಗೆ ಕೊಟ್ಟು, ಇದನ್ನು ಹೇಗೆ ಬಳಸುತ್ತೀರಿ ತೋರಿಸಿ ಎಂದರು.

‘ರಿವಾಲ್ವರ್ ಕೈಲಿ ಹಿಡಿದುಕೊಂಡ ಗೋಪಾಲಕೃಷ್ಣ, ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ತಿಳಿಯದೆ ಪೇಚಾಡಿದರು. ಕೊನೆಗೆ, ಹತ್ಯೆಗೈದಿದ್ದು ರಾಜೇಶ್ ಹಾಗೂ ಅದಕ್ಕೆ ಸಹಕಾರ ನೀಡಿದ್ದು ಅವರ ತಂದೆ ಎಂದು ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಲಿಕೆ ಬಿಟ್ಟಿದ್ದ ಪತ್ನಿಗೆ ಓದಿಸಿದ್ದ ರಾಜೇಶ್: ‘ಪದವಿ ಓದುತ್ತಿದ್ದ ಶ್ರುತಿ, ದ್ವಿತೀಯ ವರ್ಷಕ್ಕೇ ವ್ಯಾಸಂಗ ನಿಲ್ಲಿಸಿದ್ದರು. ಆದರೆ, ಮದುವೆ ಬಳಿಕ ರಾಜೇಶ್ ಪತ್ನಿಯನ್ನು ಓದಿಸಿ ಪಿಡಿಒ ಆಗುವಂತೆ ಮಾಡಿದ್ದರು’ ಎಂದು ಶ್ರುತಿ ಸಂಬಂಧಿಕರು ಹೇಳಿದರು.

ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಶನಿವಾರ ಶ್ರುತಿ ಅವರ ಮರಣೋತ್ತರ ಪರೀಕ್ಷೆ ನಡೆಯಿತು. ಈ ವೇಳೆ ಸಂಬಂಧಿಕರು ಹಾಗೂ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು. ಪರೀಕ್ಷೆ ಬಳಿಕ ಶವವನ್ನು ಪಡೆದುಕೊಂಡ ಪೋಷಕರು, ಸ್ವಗ್ರಾಮ ನೆಲಮಂಗಲಕ್ಕೆ ತೆಗೆದುಕೊಂಡು ಹೋದರು.

‘ರಾಜೇಶ್‌, ಕಗ್ಗಲೀಪುರ ಸಮೀಪದ ಗ್ರಾಮ ಪಂಚಾಯಿತಿಯೊಂದರ ಸದಸ್ಯರಾಗಿದ್ದರು.  25 ಎಕರೆ ತೋಟ ಹೊಂದಿದ್ದ ಅವರು, ಕೃಷಿಯೊಂದಿಗೆ ರಿಯಲ್‌ ಎಸ್ಟೇಟ್‌ ಸಹ ಮಾಡುತ್ತಿದ್ದರು.   ಆತ್ಮರಕ್ಷಣೆಗಾಗಿ ಐದು ವರ್ಷಗಳ ಹಿಂದೆ ಪರವಾನಗಿ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದರು. ಆದರೆ, ಇದೇ ಮೊದಲ ಬಾರಿ ಅವರು ಗುಂಡು ಹಾರಿಸಿದ್ದಾರೆ’ ಎಂದು ವಿವರಿಸಿದರು.

ಅನೈತಿಕ ಸಂಬಂಧವಲ್ಲ
‘ಶ್ರುತಿ–ಅಮಿತ್ ನಡುವೆ ಅನೈತಿಕ ಸಂಬಂಧ ಇರಲಿಲ್ಲ. ಭೂವ್ಯಾಜ್ಯದ ವಿಚಾರವಾಗಿ ಆಗಾಗ್ಗೆ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದರು. ಇದು ರಾಜೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಅವರಿಬ್ಬರೂ ರಾಜೇಶ್‌ಗೆ ಗೊತ್ತಾಗದಂತೆ ಭೇಟಿಯಾಗುತ್ತಿದ್ದರು’ ಎಂದು ಅಮಿತ್ ಸಂಬಂಧಿ ಮಂಜುನಾಥ್ ಗೌಡ ಹೇಳಿದರು.

Comments are closed.