ಕರ್ನಾಟಕ

ವೈಭವದ ಗವಿಸಿದ್ದೇಶ್ವರ ರಥೋತ್ಸವ

Pinterest LinkedIn Tumblr


ಕೊಪ್ಪಳ: ನಗರದ ಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ರಥೋತ್ಸವ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನಡೆಯಿತು.

‘ಜಯ ಗವಿಸಿದ್ದೇಶ’ ಎಂಬ ಜಯಕಾರದೊಂದಿಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥವನ್ನು ಭಕ್ತರು ಮಠದ ಆವರಣದಿಂದ ಜಾತ್ರಾ ಮೈದಾನದಲ್ಲಿರುವ ಪಾದಗಟ್ಟೆಯವರೆಗೆ ಎಳೆದು ಮತ್ತೆ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕನಕಗಿರಿ ಸುವರ್ಣಗಿರಿ ವಿರಕ್ತಮಠದ ಡಾ.ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಇದ್ದರು.

ಪಲ್ಲಕ್ಕಿ ಹೊತ್ತ ದೇವೇಗೌಡ
ದೇವರ ಉತ್ಸವ ಮೂರ್ತಿ ಪಲ್ಲಕ್ಕಿ ಮೂಲಕ ರಥದ ಸಮೀಪ ಬರುತ್ತಿದ್ದಂತೆಯೇ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪಲ್ಲಕ್ಕಿಗೆ ಹೆಗಲುಕೊಟ್ಟು ಹೆಜ್ಜೆ ಹಾಕಿದರು.

ವಿಪರೀತ ಜನದಟ್ಟಣೆ ಸೇರುತ್ತಿದ್ದಂತೆಯೇ ಅವರ ಬೆಂಬಲಿಗರು ದೇವೇಗೌಡರನ್ನು ಅಲ್ಲಿಂದ ಗಣ್ಯರ ವೇದಿಕೆಯತ್ತ ಕರೆದೊಯ್ದರು.

ಸಂಜೆ ಅನುಭಾವಿಗಳ ಅಮೃತ ಚಿಂತನಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ನಗರವಿಡೀ ಹಬ್ಬದ ವಾತಾವರಣ ಮೂಡಿದೆ.

Comments are closed.