ಕರ್ನಾಟಕ

ಬೆಂಗಳೂರಿನಲ್ಲಿ ಸಂಕ್ರಾಂತಿ ಹಬ್ಬದ ಸಡಗರ

Pinterest LinkedIn Tumblr

ಬೆಂಗಳೂರು: ಎಲ್ಲಿ ನೋಡಿದರೂ ಕಬ್ಬು, ಕಡ್ಲೆ, ಗೆಣಸುಗಳ ರಾಶಿ ಕಣ್ಣಿಗೆ ಹಬ್ಬದ ಮೆರುಗು ನೀಡುತ್ತಿದೆ. ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಘಮ ಸಂಕ್ರಾಂತಿ ಸಡಗರವನ್ನು ಹೆಚ್ಚಿಸಿವೆ.

ಸುಗ್ಗಿ ಹಬ್ಬ, ಸಂಕ್ರಾಂತಿಗೆ ನಗರ ಸಜ್ಜಾಗಿದ್ದು, ಮಾರಾಟಗಾರರ ಕೂಗಾಟ, ಕೊಳ್ಳುಗರ ಚೌಕಾಸಿಯೊಂದಿಗೆ ಮಾರುಕಟ್ಟೆಗಳಲ್ಲಿ ಶುಕ್ರವಾರ ಖರೀದಿ ಸಂಭ್ರಮ ಮನೆ ಮಾಡಿತ್ತು.

ಗಾಂಧಿ ಬಜಾರ್, ಕೆ.ಆರ್. ಮಾರುಕಟ್ಟೆ, ಯಶವಂತಪುರ, ಜಯನಗರ, ಮಲ್ಲೇಶ್ವರ, ವಿಜಯನಗರ, ದಾಸರಹಳ್ಳಿ ಮತ್ತಿತರ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಕಳೆ ಕಳೆಕಟ್ಟಿತ್ತು.

ಸಂಕ್ರಾಂತಿ ಹಬ್ಬದಲ್ಲಿ ಕಬ್ಬಿಗೆ ಬೇಡಿಕೆ ಹೆಚ್ಚಿರುತ್ತದೆ. ಈ ಬಾರಿ ಬರದಿಂದಾಗಿ ಕಬ್ಬಿನ ಫಸಲು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ಜೋಡಿ ಕಬ್ಬಿಗೆ ₹80 ರಿಂದ ₹120ವರೆಗೆ ಮಾರಾಟವಾಗುತ್ತಿದೆ.

‘ಕೆ.ಆರ್. ಮಾರುಕಟ್ಟೆಗೆ ಸಾಮಾನ್ಯ ದಿನಗಳಲ್ಲಿ 5 ಲಾರಿ ಲೋಡ್ ಕಬ್ಬು ಬಂದರೆ, ಸಂಕ್ರಾಂತಿಗೆ 10 ಲಾರಿ ಲೋಡ್‌ ಕಬ್ಬು ಬಂದಿದೆ. ಆದರೆ ಮಳೆಯ ಅಭಾವದಿಂದ ಈ ಬಾರಿ ರಾಜ್ಯದಲ್ಲಿ ಕಬ್ಬಿನ ಇಳುವರಿ ಶೇ 40ರಷ್ಟು ಕುಸಿದಿದೆ. ಹೀಗಾಗಿ ದರ ಏರಿಕೆಯಾಗಿದೆ’ ಎಂದು ವ್ಯಾಪಾರಿ ಮೋಹನ್‌ ತಿಳಿಸಿದರು.

ಡಿಸೆಂಬರ್ ತಿಂಗಳಲ್ಲಿಯೇ ಅವರೆಕಾಯಿ ಮಾರುಕಟ್ಟೆ ಪ್ರವೇಶ ಮಾಡಿದ್ದರೂ ಈ ಬಾರಿ ಅವರೆ ಸೊಗಡು ಸಾಕಷ್ಟಿಲ್ಲ. ಕಡಲೆಕಾಯಿ ಉತ್ಪಾದನೆ ಕೂಡ ಕುಸಿದಿದ್ದು, ಬೆಲೆ ದುಬಾರಿಯಾಗಿದೆ. ಕಡಲೆಕಾಯಿ ಕೆ.ಜಿಗೆ ₹80-100, ಅವರೆಕಾಯಿ ಕೆ.ಜಿಗೆ ₹70-80, ಸಿಹಿ ಗೆಣಸು ಕೆ.ಜಿಗೆ ₹30ಕ್ಕೆ ಮಾರಾಟವಾಗುತ್ತಿದೆ.

ಬಾಳೆ ಮಂಡಿಯಲ್ಲಿ ಚಂದ್ರಬಾಳೆ ಕೆ.ಜಿಗೆ ₹40, ನೇಂದ್ರ ಬಾಳೆ ₹60, ಪಚ್ಚ ಬಾಳೆ ₹22 ಮಾರಾಟ ಮಾಡಲಾಗುತ್ತಿದೆ. ಏಲಕ್ಕಿ ಬಾಳೆ ಕೆ.ಜಿಗೆ ₹40 ಇದೆ. ಮೂರು ತಿಂಗಳ ಹಿಂದೆ ಏಲಕ್ಕಿ ಬಾಳೆ ಕೆ.ಜಿಗೆ ₹100 ಇತ್ತು. ಚಿಲ್ಲರೆ ವ್ಯಾಪಾರಿಗಳು ಪ್ರತಿ ಕೆ.ಜಿ ಬಾಳೆ ಹಣ್ಣಿನ ಮೇಲೆ ₹10ಗಳಷ್ಟು ಏರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಎಳ್ಳು-ಬೆಲ್ಲ ಮಿಶ್ರಣ: ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡಲೆ ಬೀಜ, ಕಬ್ಬು, ಸಕ್ಕರೆ ಅಚ್ಚುಗಳ ಸಿದ್ಧ ಎಳ್ಳು–ಬೆಲ್ಲದ ಮಿಶ್ರಣ ಕೆ.ಜಿ.ಗೆ ₹250–300ಕ್ಕೆ ಮಾರಾಟವಾಗುತ್ತಿದೆ. ಎಳ್ಳು, ಬೆಲ್ಲದ ಮಿಶ್ರಣವನ್ನು ಪ್ರತ್ಯೇಕವಾಗಿ ಕೊಂಡರೆ ಕೆ.ಜಿ ಎಳ್ಳಿಗೆ ₹60 ರಿಂದ ₹70 ಹಾಗೂ ಕೆ.ಜಿ. ಬೆಲ್ಲ ₹150ಕ್ಕೆ ಮಾರಾಟವಾಗುತ್ತಿದೆ. ಸಕ್ಕರೆ ಅಚ್ಚು ಕೆ.ಜಿಗೆ ₹150 ಇದೆ.

ಹೂವಿನ ದರ ಇಳಿಕೆ: ಮಲ್ಲಿಗೆ ಹೂವು ಹೊರತುಪಡಿಸಿದರೆ ಇತರೆ ಹೂವುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ ₹30ರಿಂದ ₹150 ರವರೆಗೆ ಇದೆ.

ಹಾಪ್‌ಕಾಮ್ಸ್‌ ರಿಯಾಯಿತಿ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾಪ್‌ಕಾಮ್ಸ್‌ ಹಣ್ಣು, ತರಕಾರಿಗಳ ಬೆಲೆಗಳ ಮೇಲೆ ಮಾರುಕಟ್ಟೆ ದರಕ್ಕಿಂತ ಶೇ 5ರಷ್ಟು ರಿಯಾಯಿತಿ ನೀಡುತ್ತಿದೆ. ‘ಜ.14, 15 ರಂದು ಹಾಪ್‌ಕಾಮ್ಸ್‌ನ ಎಲ್ಲ 300 ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ’ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಕೃಷ್ಣ ತಿಳಿಸಿದರು.

Comments are closed.