ಕರಾವಳಿ

ದುಡಿಮೆ ಮಾಡಲಾಗದ ಸ್ಥಿತಿಯಲ್ಲಿ ಅಂಧ ನೂಜಾಡಿ ಮಂಜುನಾಥ ಪೂಜಾರಿ; ಬೇಕಿದೆ ಸಹೃದಯಿ ದಾನಿಗಳ ಸಹಕಾರ

Pinterest LinkedIn Tumblr

ಕುಂದಾಪುರ: ಇವರು ಹದಿನೇಳನೇ ವಯಸ್ಸಿನಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡು ಅಂಧರಾದವರು. ಆದರೂ ತನ್ನ ಪರಿಶ್ರಮದ ಮೂಲಕ ತನ್ನ ಕಾಲಮೇಲೆ ತಾನೂ ನಿಂತು ಕೊಳ್ಳಲು ಕೆಲವು ಕೆಲಸಗಳನ್ನು ಕಲಿತವರು. ಕಣ್ಣು ಕಾಣದ ಗಂಡನ ಛಲಕ್ಕೆ ಸಾಥ್ ನೀಡುವ ಪತ್ನಿಯ ಜೊತೆ ಇವರ ಸುಂದರ ಸಂಸಾರ. ಆದರೇ ಈಗ ಇಬ್ಬರೂ ಕೆಲಸ ಮಾಡಲಾಗದ ಸ್ಥಿತಿ. ಕಿತ್ತು ತಿನ್ನುವ ಬಡತನದ ಮಧ್ಯೆ ಬದುಕುತ್ತಿರುವ ಕುಂದಾಪುರ ನೂಜಾಡಿಯ ಮಂಜುನಾಥ ಪೂಜಾರಿ ದಂಪತಿಗಳ ನೋವಿನ ಕಥೆಯಿದು.

  

ಎರಡು ಕಣ್ಣು ಬಲಿಪಡೆದ ಜ್ವರ..
ನಾನು ಬಡವ…ನಾನು ಬಡವಿ….ನಮ್ಮ ಮನೆಯಲ್ಲಿ ಸಿರಿತನವಿಲ್ಲ..ಪ್ರೀತಿಗೆ ಬಡತನವಿಲ್ಲ.. ಎಂಬಂತೆ ಬದುಕುತ್ತಿರುವ ಆದರ್ಶ ಜೋಡಿಗಳು ಇವರು. ಗಂಡ ಅಂಧನೆನ್ನುವ ಕಿಂಚಿತ್ತೂ ನೋವಿಲ್ಲದೇ ಆತನ ಕಷ್ಟ ಸುಖಗಳಲ್ಲಿ ಹೆಗಲು ಕೊಟ್ಟ ಪತ್ನಿ. ಕಣ್ಣು ಕಾಣಿಸದಿದ್ದರೂ ತನ್ನ ಹೆಂಡತಿಯನ್ನು ಕೈಯಲ್ಲಾದಷ್ಟರ ಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲ ಹೊತ್ತ ಪತಿ. ಇವರ ಹೆಸರು ಮಂಜುನಾಥ ಪೂಜಾರಿ. ಕುಂದಾಪುರದ ನೂಜಾಡಿಯ ಚೇಳ್‌ಕೊಡ್ಲು, ಹೊಟ್ಲಬೈಲು ಗುಡ್ಡಿಮನೆ ನಿವಾಸಿ ಇವರು. ಬಡ ಕುಟುಂಬದಲ್ಲಿ ಜನಿಸಿ ಹೊಟ್ಟೆ ಪಾಡಿಗಾಗಿ ತನ್ನ ಒಂಬತ್ತನೇ ವಯಸ್ಸಿಗೆ ಊರು ಬಿಟ್ಟು ಬೆಂಗಳೂರು ಸೇರಿದವರು. ಅಲ್ಲಿ ಹೋಟೇಲೊಂದರಲ್ಲಿ ಏಂಟು ವರ್ಷಗಳ ಕಾಲ ಕೆಲಸ ಮಾಡಿ ಜೀವನ ನಿರ್ವಹಣೆ ಜೊತೆಗೆ ತನ್ನ ಸಾಕಿ ಸಲುಹಿದ ಅಜ್ಜಿಯನ್ನು ನೋಡಿಕೊಂಡವರು. ತನ್ನ 17 ನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಜ್ವರ ಒಂದೇ ದಿನದಲ್ಲಿ ಇವರ ಎರಡು ಕಣ್ಣುಗಳನ್ನು ಬಲಿ ಪಡೆದುಕೊಂಡಿತ್ತು. ಅಂಧನಾಗಿ ಊರಿಗೆ ವಾಪಾಸ್ಸಾದ ಮಂಜುನಾಥರನ್ನು ಆಕೆ ಅಜ್ಜಿ ಚಂದು ಅವರು ಮಗನಂತೆ ನೋಡಿಕೊಳ್ಳುತ್ತಾರೆ. ಮಣಿಪಾಲ, ವೆನ್ಲಾಕ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಸುತ್ತಿ ಹಣ ಪೋಲು ಮಾಡಿದರೂ ಕಣ್ಣಿನ ದೃಷ್ಟಿ ಮಾತ್ರ ಬಾರಲಿಲ್ಲ. ಕಾಲ ಕ್ರಮೇಣ ಮಂಜುನಾಥ ಪಾಲಿಗೆ ಸರ್ವಸ್ವವೂ ಆಗಿದ್ದ ಅಜ್ಜಿಯೂ ಬಾರದ ಲೋಕಕ್ಕೆ ತೆರಳುತ್ತಾರೆ. ಅಲ್ಲಿಂದ ಆರಂಭವಾಗುತ್ತೆ ಮಂಜುನಾಥ ಕಷ್ಟದ ಜೀವನ. ಕಣ್ಣಿಲ್ಲದಿದ್ದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾರೆ, ಅಂದಾಜಿನ ಮೇಲೆ ಸರಾಗವಾಗಿ ನಡೆಯುತ್ತಾರೆ. ಮೊಬೈಲ್ ನಂಬರ್ ಜ್ಞಾಪಕ ಇಟ್ಟುಕೊಳ್ಳುತ್ತಾರೆ.

ಪತಿಗೆ ಸಾಥ್ ನೀಡುವ ಪತ್ನಿ….
ಮೊದಲಿನಿಂದಲೂ ಅಜ್ಜಿಯ ಜೊತೆಗೆ ಬೆಳೆದ ಮಂಜುನಾಥ ಅವರ ಅಜ್ಜಿಯ ಕಾಲಾನಂತರ ಒಂದಷ್ಟು ಕಾಲ ಒಂಟಿ ಜೀವನವನ್ನು ಕಷ್ಟಗಳ ಜೊತೆಗೆ ಸಾಗಿಸುತ್ತಾರೆ. ಕೊನೆಗೂ ಗೆಳೆಯರ ಒತ್ತಾಯದಂತೆ ಕೋಟ ಪಾರಂಪಳ್ಳಿಯ ಕುಸುಮಾ ಯಾನೆ ಪದ್ದು ಅವರನ್ನು ವಿವಾಹವಾಗುವ ಮೂಲಕ ಬದುಕಿನ ಎರಡನೇ ಅಧ್ಯಾಯವನ್ನು ಮಂಜುನಾಥ ಆರಂಭಿಸುತ್ತಾರೆ. ಮದುವೆಯಾದ ಬಳಿಕ ಸಂಸಾರದ ಹೊಣೆ ನಿರ್ವಹಿಸಬೇಕೆನ್ನುವಾಗ ಮಂಜುನಾಥರಿಗೆ ತೋಚಿದ್ದು ತಾನೂ ಅಜ್ಜಿಯ ಜೊತೆಗಿರುವಾಗ ಕಲಿತ ತೆಂಗಿನ ಮರ ಹತ್ತುವ ಕೆಲಸ. ಕಣ್ಣು ಕಾಣದಿದ್ದರೂ ಸರಾಗನೇ ತೆಂಗಿನ ಮರ ಏರಿ ತೆಂಗಿನ ಕಾಯಿ ಕೀಳುವುದಲ್ಲದೇ, ತೆಂಗಿನ ಕಾಯಿ ಸುಲಿಯುವುದು, ಅಡಿಕೆ ಸುಲಿಯುವುದು ಮೊದಲಾದ ಕೆಲಸಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆಸುಪಾಸಿನ ಮನೆಗಳಿಗೆ ಕೆಲಸಕ್ಕೆ ಇವರನ್ನು ಪತ್ನಿಯೇ ಬಿಟ್ಟು ಬರುವ ಪರಿಪಾಠ ಮಾಡಿಕೊಳ್ಳುವುದಲ್ಲದೇ ಕಿಂಚಿತ್ ಕೂಲಿಗಾಗಿ ಪದ್ದು ಅವರು ಕೂಡ ಉದ್ಯೋಗ ಖಾತ್ರಿ ಕೆಲಸ ಮಾಡಿಕೊಂಡು ಅದ್ಯೆಗೋ ಜೀವನ ನಿರ್ವಹಣೆಗಾಗಿ ಮಾಡುತ್ತಾರೆ. ಈತನ್ಮದ್ಯೆ ಅಲ್ಲಲ್ಲಿ ಸಾಲ ಮಾಡಿ ಪುಟ್ಟದೊಂದು ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಸ್ವಸಹಾಯ ಸಂಘದಲ್ಲಿ ಸಾಲ ಮಾಡಿ ವಿದ್ಯುತ್ ಹಾಗೂ ಸೋಲಾರ್ ಸಂಪರ್ಕವನ್ನು ಅಳವಡಿಸಿಕೊಳುತ್ತಾರೆ.

ಕಿತ್ತು ತಿನ್ನುವ ಬಡತನದಲ್ಲಿ ಮಂಜುನಾಥ್
ಹೀಗೆ ಕಷ್ಟದಲ್ಲಿಯೂ ನನಗೆ-ನೀನು, ನಿನಗೆ-ನಾನು ಎಂಬಂತೆ ಸ್ವಾವಲಂಭಿ ಬದುಕು ಸಾಗಿಸುತ್ತಿದ್ದ ಈ ದಂಪತಿಗಳಿಗೆ ಇನ್ನೊಂದು ಆಘಾತ ಎರಗಿ ಬರುತ್ತದೆ. ಗಂಡನ ಕಷ್ಟಕ್ಕೆ ಹೆಗಲು ಕೊಡುತ್ತಿದ್ದ ಪದ್ದು ಅವರಿಗೂ ಅನಾರೋಗ್ಯ ಕಾಡಿ ಮೂರ್ನಾಲ್ಕು ತಿಂಗಳುಗಳ ಹಾಸಿಗೆ ಹಿಡಿಯುವುದಲ್ಲದೇ ನಲವತ್ತು ಸಾವಿರಕ್ಕೂ ಅಧಿಕ ಹಣ ಖರ್ಚಾಗುತ್ತದೆ. ತನ್ನನ್ನು ಅಲಿಲ್ಲಿ ಕೆಲಸಕ್ಕೆ ಬಿಟ್ಟು ಬರುವುದಲ್ಲದೇ ತಾನೂ ಕೂಡ ಕೆಲಸ ಮಾಡಿ ಸಂಘದ ಸಾಲ ಹಾಗೂ ಮನೆ ಜವಬ್ದಾರಿ ನೋಡುತ್ತಿದ್ದ ಪತ್ನಿ ಅನಾರೋಗ್ಯದ ತರುವಾಯ ಮಂಜುನಾಥ ಕೆಲಸಕ್ಕೆ ತೆರಳಲು ಆಗಲಿಲ್ಲ. ಬರೋಬ್ಬರಿ ಏಳೆಂಟು ತಿಂಗಳುಗಳಿಂದ ಯಾವುದೇ ದುಡಿಮೆಯಿಲ್ಲದೇ ಈ ಕುಟುಂಬ ಪರಿತಪಿಸುತ್ತಿದೆ. ಇನ್ನೊಂದೆಡೆ ಗುಡ್ಡದ ಮೇಲಿನ ಮನೆಯಾದ ಕಾರಣ ಸರಿಯಾದ ಸಂಪರ್ಕ ರಸ್ತೆಯೂ ಇಲ್ಲ ಅಲ್ಲದೇ ಮನೆಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ಮುಕ್ಕಾಲು ಕಿಲೋಮೀಟರ್ ನಡೆದು ಸಾಗಿ ನೀರು ಹೊತ್ತು ತರಬೇಕು. ಇವರಿಗಿದ್ದ ಅಂತ್ಯೋದಯ ಪಡಿತರ ಕಾರ್ಡು ರದ್ದುಗೊಳಿಸಿ ಬಿಪಿ‌ಎಲ್ ಕಾರ್ಡು ನೀಡಿದ ಕಾರಣ ಸಿಗುವ ಪಡಿತರ ಸಾಮಾಗ್ರಿಯೂ ಇವರ ಅಗತ್ಯಕ್ಕಾಗುವಷ್ಟು ಸಿಗುತ್ತಿಲ್ಲ. ಸರಕಾರದಿಂದ ತಿಂಗಳು ಬರುವ ಕಿಂಚಿತ್ ಅಂಗವಿಕಲ ಸಹಾಯಧನ ಹೊರತುಪಡಿಸಿದರೇ ಇವರಿಗೆ ಸದ್ಯ ಬೇರ್‍ಯಾವ ಆಧಾಯವೂ ಇಲ್ಲದಾಗಿದೆ.

ಒಟ್ಟಿನಲ್ಲಿ ಅಂಧತ್ವದಲ್ಲಿಯೂ ತನ್ನ ಕಾಲ ಮೇಲೆ ತಾನು ನಿಂತಿದ್ದ ಮಂಜುನಾಥ ಪೂಜಾರಿ ಹಾಗೂ ಅವರಿಗೆ ಹೆಗಲು ಕೊಟ್ಟಿದ್ದ ಪದ್ದು ದಂಪತಿಗಳು ಈಗ ಕಿತ್ತು ತಿನ್ನುವ ಬಡತನದಲ್ಲಿ ದಿನದೂಡುತ್ತಿದ್ದಾರೆ. ಸರಕಾರ, ಜನಪ್ರತಿನಿಧಿಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು, ದಾನಿಗಳು ಇವರತ್ತ ಗಮನಹರಿಸಿ ಮಾನವೀಯತೆ ಮೆರೆದರೆ ಈ ಕುಟುಂಬ ಮತ್ತೆ ತಮ್ಮ ಬಾಳಲ್ಲಿ ನಗು ಕಾಣಬಹುದಾಗಿದೆ.

Account Details:

Karnataka Vikas Grameena Bank
Branch – 8103 HEMMADY
A/C No – 89031893621
NAME – Mr. MANJUNATH        CHANDRA POOJARY
IFSC – KVGB0008103

——————————————

ವರದಿ- ಯೋಗೀಶ್ ಕುಂಭಾಸಿ

Comments are closed.