ಕರ್ನಾಟಕ

ಪೌರ ಕಾರ್ಮಿಕರಿಗೂ ವಿದೇಶ ಪ್ರವಾಸ ಭಾಗ್ಯ

Pinterest LinkedIn Tumblr


ಬೆಂಗಳೂರು, ಡಿ. ೧೦- ಪೌರ ಕಾರ್ಮಿಕರಿಗೂ ವಿದೇಶ ಪ್ರವಾಸ ಭಾಗ್ಯವನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿದೇಶದ ಸ್ವಚ್ಛತಾ ವ್ಯವಸ್ಥೆಯನ್ನು ವೀಕ್ಷಿಸಿ ಅತ್ಯಾಧುನಿಕ ಸ್ವಚ್ಛತಾ ವ್ಯವಸ್ಥೆಯನ್ನು ಪೌರ ಕಾರ್ಮಿಕರಿಗೆ ತಿಳಿಸಿಕೊ‌ಡಲು ಕೆಲ ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲು ಚಿಂತನೆ ನಡೆದಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಸಫಾಯಿ ಕರ್ಮಚಾರಿ ಆಯೋಗ ವಿಕಾಸಸೌಧದಲ್ಲಿಂದು ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಸಬಲೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಆರೋಗ್ಯವನ್ನೇ ಒತ್ತೆ ಇಟ್ಟು ಬೇರೆಯವರ ಆರೋಗ್ಯಕ್ಕೆ ಪೌರ ಕಾರ್ಮಿಕರು ಶ್ರಮಿಸುತ್ತಾರೆ. ಇವರಿಗೆ ಸಮಾಜದಲ್ಲಿ ಗೌರವ ಸಿಗುವಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ಪೌರ ಕಾರ್ಮಿಕರಿಗಾಗಿ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಮನೆ ನಿರ್ಮಾಣಕ್ಕೆ 7.5 ಲಕ್ಷ ನೆರವು, ಗುತ್ತಿಗೆ ಪದ್ಧತಿ ರದ್ದು ಮಾಡಿ ನೌಕರಿಯನ್ನು ಖಾಯಂ ಮಾಡಿ ಸಂಬಂಳವನ್ನು ನೇರ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಪೌರಕಾರ್ಮಿಕರಿಲ್ಲದೆ ಯಶಸ್ವಿಯಾಗುವುದಿಲ್ಲ. ಗಾಂಧೀಜಿಯವರ ಕನ್ನಡಕ ಇಟ್ಟುಕೊಂಡು ರಾಜಕಾರಣಿಗಳು ತಾವೇ ಕಸ ಹಾಕಿ ಒಂದು ದಿನ ಬೀದಿಯಲ್ಲಿ ಕಸ ಗು‌ಡಿಸಿದರೆ ಸ್ವಚ್ಛ ಭಾರತ ಆಗುವುದಿಲ್ಲ. ಪೌರ ಕಾರ್ಮಿಕರಿಂದ ಮಾತ್ರ ಸ್ವಚ್ಛ ಭಾರತ ಸಾಧ್ಯ ಎಂದರು.
ಶೋಷಿತರಿಗೆ ಮೀಸಲಾತಿ ಸಿಗಬೇಕೆಂಬುದು ತಮ್ಮ ಉದ್ದೇಶ. ಅದಕ್ಕಾಗಿಯೇ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಲಾಗಿದೆ. ಮಂತ್ರಿಗಿರಿ ಇರಲಿ ಇಲ್ಲದಿರಲಿ ಶೋಷಿತರ ಪರ ತಾವು ಯಾವಾಗಲೂ ಧ್ವನಿ ಎತ್ತುತ್ತೇನೆ. ಪರಿಶಿಷ್ಟ ಜಾತಿಯ ಎಲ್ಲ 101 ಜಾತಿಗಳಿಗೂ ನ್ಯಾಯ ಸಿಗಬೇಕು ಎಂದು ಸಚಿವ ಆಂಜನೇಯ ಹೇಳಿದರು.
ಈ ಕಾರ್ಯಾಗಾರದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜು, ಪರಿಶಿಷ್ಟ ಜಾತಿ ಅಭಿವೃದ್ಧಿ ವರ್ಗದ ಅಧ್ಯಕ್ಷ ಎ. ಮುನಿಯಪ್ಪ, ಆಯೋಗದ ಸದಸ್ಯರಾದ ಮೀನಾಕ್ಷಮ್ಮ, ಕಾರ್ಯದರ್ಶಿ ಆರ್. ಎಚ್. ನಟರಾಜ್, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ಇ. ವೆಂಕಟಯ್ಯ ಮತ್ತಿತರರು ಉಪಸ್ಥಿತರಿದ್ದರು.

Comments are closed.