ರಾಷ್ಟ್ರೀಯ

ಐಟಿ ತನಿಖೆಯಿಂದ ಸಹಕಾರಿ ಬ್ಯಾಂಕ್‌ಗಳ ಕೋಟಿಕೋಟಿ ಅಕ್ರಮ ವಹಿವಾಟು ಬಯಲು

Pinterest LinkedIn Tumblr


ನವದೆಹಲಿ, ಜ. ೧೦- ಸಿಕ್ಕವನಿಗೇ ಸೀರುಂಡೆ ಎನ್ನುವಂತೆ ಅಧಿಕ ಮುಖಬೆಲೆ ನೋಟುಗಳ ರದ್ಧತಿಯ ನಂತರ ದೇಶಾದ್ಯಂತದ ಸಹಕಾರಿ ಬ್ಯಾಂಕುಗಳು ಭಾರಿ ಅಕ್ರಮ ವಹಿವಾಟಿನಲ್ಲಿ ತೊಡಗಿರುವುದು ಆದಾಯ ತೆರಿಗೆ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಬೇನಾಮಿ ಖಾತೆಗಳು ತೆರೆದಿರುವುದು, ಲೆಕ್ಕಕ್ಕೆ ಇಡದ ಕೋಟಿಗಟ್ಟಲೆ ಹಣ ಖಾತೆಗಳಲ್ಲಿ ಜಮಾ, ಹಳೇ ನೋಟುಗಳ ಜಮಾ ಇತ್ಯಾದಿ ಅಕ್ರಮ ವಹಿವಾಟುಗಳು ವ್ಯಾಪಕವಾಗಿ ನಡೆದಿದೆ, ಈ ಕುರಿತಂತೆ ನಿಯಂತ್ರಣಾ ಕ್ರಮ ಜಾರಿಗೆ ತರಲು ಸರಕಾರ ಮುಂದಾಗಿದೆ.

ನ. 8 ರಂದು 500 ಮತ್ತು 1000 ರೂ. ನೋಟು ರದ್ಧತಿ ಮಾಡಿದ ನಂತರದಲ್ಲಿ ಸಹಕಾರಿ ವಲಯದ ಬ್ಯಾಂಕುಗಳಲ್ಲಿ ಅಕ್ರಮ ವ್ಯವಹಾರಗಳು ನಡೆದಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ವರದಿಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಬೆಚ್ಚಿ ಬೀಳುವ ಮಟ್ಟಿಗೆ ಲೆಕ್ಕವಿಲ್ಲದ ಹಣದ ಲೇವಾದೇವಿ ನಡೆದಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬೇನಾಮಿ ಖಾತೆಗಳು

ದೆಹಲಿಯ ದರಿಯಾ ಗಂಜ್‌ನ ಸಹಕಾರಿ ಬ್ಯಾಂಕ್ ಲೆಕ್ಕಗಳನ್ನು ತನಿಖೆ ಮಾಡಿರುವ ಆದಾಯ ತೆರಿಗೆ ಇಲಾಖೆ 1200 ಬೇನಾಮಿ ಖಾತೆಗಳನ್ನು ತೆರೆದಿರುವುದನ್ನು ಪತ್ತೆ ಹಚ್ಚಿದೆ. ಹಾಗೆಯೇ 120 ಕೋಟಿ ಮೊತ್ತದಷ್ಟು ಲೆಕ್ಕಕ್ಕೆ ಸಿಗದ ಮೊತ್ತವನ್ನು ಮತ್ತು 3.2 ಕೋಟಿ ರೂ. ಮೊತ್ತದ ಹಳೇ ನೋಟುಗಳನ್ನು ಖಾತೆಗಳಲ್ಲಿ ಜಮಾ ಮಾಡಿರುವುದು ತನಿಖೆಯ ವೇಳೆ ಬಯಲಾಗಿದೆ.

1400 ಕೋಟಿ ಜಮಾ

ದೆಹಲಿಯ ಸಹಕಾರ ಬ್ಯಾಂಕ್ ಕತೆ ಹಾಗಾದರೆ, ಮಹಾರಾಷ್ಟ್ರದ ಸಹಕಾರ ಬ್ಯಾಂಕ್‌ವೊಂದರಲ್ಲಿ ನೋಟು ರದ್ಧತಿಯ ನಂತರದಲ್ಲಿ ಬರೋಬ್ಬರಿ 1400 ಕೋಟಿ ರೂ.ಗಳನ್ನು ಜಮಾ ಮಾಡಿರುವುದನ್ನು ಜಾರಿ ನಿರ್ದೇಶನಾಲಯ ಪತ್ತೆ ಹಚ್ಚಿದೆ. ಇದು ದೆಹಲಿ ಮುಂಬೈ ಮಾತ್ರವಲ್ಲ ದೇಶದ ಉಳಿದ ರಾಜ್ಯಗಳಲ್ಲಿಯ ಸಹಕಾರ ಬ್ಯಾಂಕುಗಳಲ್ಲಿಯೂ ಇಂತಹುದೇ ಅಕ್ರಮ ವಹಿವಾಟು ನಡೆದಿದೆ.

ಹೀಗಾಗಿ ರಾಜ್ಯ ಹಾಗೂ ಜಿಲ್ಲಾಮಟ್ಟದ ಸಾವಿರಾರು ಸಹಕಾರ ಬ್ಯಾಂಕುಗಳ ವಹಿವಾಟು ತಪಾಸಣೆಯನ್ನು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಕೈಗೊಂಡಿವೆ.

Comments are closed.