ಕರ್ನಾಟಕ

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಎಸಿ ಅಧಿಕಾರಿ ಪತ್ನಿಗೂ ಲೈಂಗಿಕ ಕಿರುಕುಳ

Pinterest LinkedIn Tumblr


ಬೆಂಗಳೂರು,ಜ.೧೦-ಕಳೆದ ಡಿ.೩೧ರ ಮಧ್ಯರಾತ್ರಿಯ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪ್ರತಿಷ್ಠಿತ ಕ್ಲಬ್‌ವೊಂದರಲ್ಲಿ ಅದು ಗಣ್ಯ ವ್ಯಕ್ತಿಯೊಬ್ಬರ ಪತ್ನಿಯ ಜೊತೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ಟೆನಿಸ್ ಅಸೋಸಿಯೇಷನ್‌ಲ್ಲಿ ಡಿ.೩೧ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರ( ಎಸಿ) ಪತ್ನಿ ಜೊತೆ ೧೦ ಕ್ಕೂ ಹೆಚ್ಚು ಮಂದಿ ಪುಂಡರು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ಯತ್ನ ನಡೆಸಿದ ಪ್ರಕರಣ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವ ಪೊಲೀಸರು ಶಿವರಾಜ್ ಎಂಬಾತನನ್ನು ಬಂಧಿಸಿ ಉಳಿದವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ

ಕಳೆದ ಡಿ.೩೧ರ ಮಧ್ಯರಾತ್ರಿಯ ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಎಸಿ ಪತ್ನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.ಎಸಿ ಯೊಬ್ಬರ ಪತ್ನಿಯನ್ನು ಕಿಡಿಗೇಡಿಗಳು ಬಿಟ್ಟಿಲ್ಲ ಎಂದಾದರೆ ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದುರಾಗಿದೆ.

ಡಿ.೩೧ರ ರಾತ್ರಿ ಕರ್ನಾಟಕ ಟೆನಿಸ್ ಅಸೋಸಿಯೇಷನ್‌ಲ್ಲಿ ಹೊಸ ವರ್ಷಾಚರಣೆಗಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ಹಾಗೂ ಅವರ ಪತ್ನಿ ಭಾಗವಹಿಸಿದ್ದರು.ಮಧ್ಯರಾತ್ರಿ ಪತ್ನಿಯನ್ನು ತಾವು ಕುಳಿತಿದ್ದ ಟೇಬಲ್ ಬಳಿ ಬಿಟ್ಟು ಕೌಂಟರ್ ಬಳಿ ಊಟಕ್ಕೆ ಹೋದಾಗ ಶಿವರಾಜ್ ಸೇರಿ ೧೫ ಮಂದಿ ಕಿಡಿಗೇಡಿಗಳು ಟೇಬಲ್ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ.

ಅಲ್ಲದೇ ಎಸಿ ಪತ್ನಿಯ ಜತೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ ಊಟ ಮುಗಿಸಿ ಎಸಿ ಅವರು ಪತ್ನಿಯ ಕಡೆ ಬರುತ್ತಿರುವುದನ್ನು ನೋಡಿದ ಕಿಡಿಗೇಡಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಪತಿಗೆ ಸಂತ್ರಸ್ಥ ಮಹಿಳೆಯು ಕಿಡಿಗೇಡಿಗಳ ಅಸಭ್ಯ ವರ್ತನೆಯನ್ನು ತಿಳಿಸಿದ್ದಾರೆ.

ಕಮ್ಮನಹಳ್ಳಿಯ ಲೈಂಗಿಕ ದೌರ್ಜನ್ಯ ಕೃತ್ಯದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದನ್ನು ನೋಡಿದ ಎಸಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಳೆದ ಜ.೪ರಂದು ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿ ಐಪಿಸಿ ಸೆಕ್ಷನ್ ೫೦೯, ೫೧೦, ೧೪೯ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು

ಕೃತ್ಯದಲ್ಲಿ ಭಾಗಿಯಾಗಿದ್ದ ಶಿವರಾಜ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು ಉಳಿದವರಿಗಾಗಿ ಶೋಧ ನಡೆಸಲಾಗಿದೆ ಎಸಿಯವರು ನೀಡಿರುವ ದೂರಿನಲ್ಲಿ ಕ್ಲಬ್‌ನಲ್ಲಿದ್ದ ತನ್ನ ಪತ್ನಿಯ ಜೊತೆ ಪೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಬಂದ ಕಿಡಿಗೇಡಿಗಳು ಆನಂತರ ಸೆಲ್ಫಿ ತೆಗೆಸಿಕೊಳ್ಳುವ ನೆಪದಲ್ಲಿ ಮೇಲೆ ಬಿದ್ದು ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೃತ್ಯದ ಕುರಿತು ಎಸಿ ಅಲ್ಲದೇ ಅವರ ಸಂತ್ರಸ್ಥ ಪತ್ನಿಯಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.

Comments are closed.