ರಾಷ್ಟ್ರೀಯ

ಬ್ಯಾಂಕಿಗೆ 3 ಲಕ್ಷ ಕೋಟಿ ಕಪ್ಪು ಹಣ?: ತನಿಖೆ

Pinterest LinkedIn Tumblr


ನವದೆಹಲಿ(ಜ. 10): ನೋಟು ಅಮಾನ್ಯ ಕ್ರಮ ಜಾರಿಗೆ ಬಂದ ಬಳಿಕ ದೇಶದ ವಿವಿಧ ಬ್ಯಾಂಕುಗಳಲ್ಲಿ 3-4 ಲಕ್ಷ ಕೋಟಿ ಕಪ್ಪು ಹಣ ಸಂಗ್ರಹಗೊಂಡಿರಬಹುದೆಂದು ಆದಾಯ ಇಲಾಖೆ ಶಂಕಿಸಿದೆ. ಕಳೆದ 2 ತಿಂಗಳಿನಲ್ಲಿ ಸಮರ್ಪಕ ದಾಖಲೆಗಳಿಲ್ಲದೇ ಬ್ಯಾಂಕ್’ಗಳಲ್ಲಿ ಠೇವಣಿಗೊಂಡ ಹಣದ ಪ್ರಮಾಣ ಇದಾಗಿದೆ. ಇಂಥ ಪ್ರಕರಣಗಳನ್ನು ಕೂಲಂಕಷವಾಗಿ ತನಿಖೆಗೊಳಪಡಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ನೋಟ್ ಬ್ಯಾನ್ ಮಾಡುವ ಮುನ್ನ ದೇಶದಲ್ಲಿ 15.44 ಲಕ್ಷ ಕೋಟಿ ನಗದು ಹಣವಿತ್ತು. ಇದರಲ್ಲಿ ಶೇ. 20ರಷ್ಟು ಹಣವು ಕಪ್ಪುಹಣವೆಂಬ ಅಂದಾಜು ಕೇಂದ್ರ ಸರಕಾರದ್ದು. ಹೀಗಾಗಿ, 3-4 ಲಕ್ಷ ಕೋಟಿ ಹಣವು ಬ್ಯಾಂಕ್’ಗಳಿಗೆ ಡೆಪಾಸಿಟ್ ಆಗದೇ ಹೋಗಬಹುದು ಎಂದು ಸರಕಾರ ನಿರೀಕ್ಷಿಸಿತ್ತು. ಆದರೆ, ಶೇ. 95-97ರಷ್ಟು ನಗದು ಹಣವು ವಾಪಸ್ ಬಂದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್’ಗೆ ಠೇವಣಿಯಾದ ಹಣದಲ್ಲಿ ಬ್ಲ್ಯಾಕ್’ಮನಿ ಕೂಡ ಇದ್ದೇ ಇರಬಹುದು ಎಂದು ನಂಬಿರುವ ಐಟಿ ಇಲಾಖೆಯು, ಅನುಮಾನಾಸ್ಪದ ಠೇವಣಿಗಳ ವಿವರಗಳನ್ನು ಜಾಲಾಡುತ್ತಿದೆ. ಜೊತೆಗೆ ಒಂದೇ ಪ್ಯಾನ್ ನಂಬರ್, ಮೊಬೈಲ್ ನಂಬರ್ ಮತ್ತು ವಿಳಾಸವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ನೀಡಿ ಕೋಟಿಗಟ್ಟಲೆ ಹಣ ಡೆಪಾಸಿಟ್ ಮಾಡಿರುವ ಪ್ರಕರಣಗಳೂ ಕಣ್ಣಿಗೆ ಬಿದ್ದಿವೆ. ಇವುಗಳನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

Comments are closed.