ಕರ್ನಾಟಕ

ವಿಶ್ವದ ಅತಿ ಸಿರಿವಂತ ಕನ್ನಡಿಗ ಯಾರು..? ಇಲ್ಲಿದೆ 10 ಕೋಟ್ಯಾಧಿಪತಿ ಕನ್ನಡಿಗರಿವರ ವಿವರ …!

Pinterest LinkedIn Tumblr

ಬೆಂಗಳೂರು: ವಿವಿಧ ಉದ್ಯಮಗಳನ್ನು ನಡೆಸುವ ಮೂಲಕ ಶ್ರೀಮಂತರ ಪಟ್ಟಿಯಲ್ಲಿರುವ 10 ಕೋಟ್ಯಾಧಿಪತಿ ಕನ್ನಡಿಗರಿವರ ವಿವರಗಳನ್ನೂ ಇಲ್ಲಿ ನೀಡಲಾಗಿದೆ.

ಉದ್ಯೋಗ ಅರಸಿ 31 ವರ್ಷಗಳ ಹಿಂದೆ ಸಂಯುಕ್ತ ಅರಬ್‌ರಾಷ್ಟ್ರದ ಅಬು ದಾಭಿಗೆ ತೆರಳಿ, ಅಲ್ಲಿ 10*12 ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ವಾಸವಿದ್ದ ಬಿ.ಆರ್‌.ಶೆಟ್ಟಿ ವಿಶ್ವದ ಅತಿ ಸಿರಿವಂತ ಕನ್ನಡಿಗ.

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್‌ಕಲೀಫಾದ 15,000 ಚದರಅಡಿ ವಿಸ್ತೀರ್ಣದ 100ನೇ ಮಹಡಿ ಇವರಿಗೆ ಸೇರಿದೆ. ‘ಇದೇ ಕಟ್ಟಡದ ಬೇರೆ ಬೇರೆ ಮಹಡಿಗಳಲ್ಲಿ ನನ್ನ ಕೆಲವು ಫ್ಲ್ಯಾಟ್‌ಗಳಿವೆ,’ಎನ್ನುತ್ತಾರೆ ಶೆಟ್ಟಿ. ಇಷ್ಟೇ ಅಲ್ಲ, ದುಬೈ, ಅಬುಧಾಬಿ, ಲಂಡನ್‌, ಪರ್ತ್‌, ಬೆಂಗಳೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಇವರ ವಸತಿ ಕಟ್ಟಡಗಳಿವೆ. ಶೆಟ್ಟಿ ಅವರ ಒಟ್ಟು ಆಸ್ತಿ ಮೌಲ್ಯ 18,700 ಕೋಟಿ. ಇವರ ಒಬ್ಬನೇ ಮಗನ ಮದುವೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.

ಟೈಮ್ಸ್‌ಆಫ್‌ಇಂಡಿಯಾದ ಕೋಟ್ಯಾಧಿಪತಿ ಕನ್ನಡಿಗರ ಪಟ್ಟಿಯಲ್ಲಿ ಕನ್ನಡಿಗರಷ್ಟೇ ಅಲ್ಲ ತುಳು ಹಾಗೂ ಕೊಂಕಣಿ ಭಾಷಿಕರೂ ಇದ್ದಾರೆ. ಕರ್ನಾಟಕದಲ್ಲಿ ಕನಿಷ್ಠ 100 ವರ್ಷಗಳ ಕಾಲ ಬಾಳಿರುವ ಕುಟುಂಬದವರನ್ನು ಈ ಪಟ್ಟಿಗೆ ಪರಿಗಣಿಸಲಾಗಿದೆ. ಇದು ಕರ್ನಾಟಕದಲ್ಲಿ ನೆಲೆಸಿರುವ ಸಿರಿವಂತರ ಪಟ್ಟಿ ಅಲ್ಲ.

ನಂ2: ಇನ್ಫೋಸಿಸ್‌ಸಹ ಸಂಸ್ಥಾಪಕ ಎನ್‌ಆರ್‌ನಾರಯಣಮೂರ್ತಿ ಅವರ ಒಟ್ಟು ಆಸ್ತಿ 11,100 ಕೋಟಿ ರೂ. ದೇಶದ ಪ್ರಮುಖ ಐಟಿ ಕಂಪನಿಯಾಗಿ ಇನ್ಫೋಸಿಸ್‌ಹೆಸರು ಮಾಡಿದೆ. ಶಿಡ್ಲಘಟ್ಟ ಇವರ ಜನ್ಮ ಸ್ಥಳ, ಬೆಳೆದದ್ದು ಮೈಸೂರಿನಲ್ಲಿ. ಮೂರ್ತಿ ಅವರ ತಂದೆ ಹೈಸ್ಕೂಲ್‌ಶಿಕ್ಷಕರು. ಮೂರ್ತಿ ಕಾನ್ಪುರದ ಐಐಟಿ ಪದವೀಧರರು.

ನಂ3: ಶಿಕ್ಷಣ ಹಾಗೂ ಆರೋಗ್ಯ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ರಂಜನ್‌ಪೈ, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರ ತಾತ ಟಿಎಂಎ ಪೈ ಮಣಿಪಾಲದಲ್ಲಿ 1953ರಲ್ಲಿ ಕಸ್ತೂರ್ಬಾ ಮೆಡಿಕಲ್‌ಕಾಲೇಜು ಹಾಗೂ ಮಣಿಪಾಲ್‌ಇನ್‌ಸ್ಟಿಟ್ಯೂಟ್‌ಆಫ್‌ಟೆಕ್ನಾಲಜಿ (ಮೈಕ್ರೋಸಾಫ್ಟ್‌ಸಿಇಓ ಸತ್ಯಾ ನಾಡೆಳ್ಳಾ ಪದವಿ ಪಡೆದ ಸಂಸ್ಥೆ) ಪ್ರಾರಂಭಿಸಿದ್ದರು. ಕುಟುಂಬದ ಉದ್ಯಮವನ್ನು ವಿಸ್ತರಿಸುವಲ್ಲಿ ರಂಜನ್‌ಪೈ ಪಾತ್ರ ದೊಡ್ಡದು. ಇವರ ಒಟ್ಟು ಆಸ್ತಿ ಮೌಲ್ಯ 10,200 ಕೋಟಿ ರೂ.

ನಂ4: ಇನ್‌ಫೋಸಿಸ್‌ಸಹ ಸಂಸ್ಥಾಪಕ ನಂದನ್‌ನಿಲೇಕಣಿ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 7,640 ಕೋಟಿ ರೂ. ಬೆಂಗಳೂರಿನಲ್ಲಿ ಜನಿಸಿದ ನೀಲೇಕಣಿ ಬಿಷಪ್‌ಕಾಟನ್‌ಶಾಲೆಯ ವಿದ್ಯಾರ್ಥಿ, ಐಐಟಿ ಬಾಂಬೆ ಪದವೀಧರರು. 2002ರಿಂದ 2007ರವರೆಗೆ ಇನ್‌ಫೋಸಿಸ್‌ಸಿಇಓ ಆಗಿದ್ದ ನಂದನ್‌, ನಂತರ ಯುಐಡಿಎಐ ಅಧ್ಯಕ್ಷರಾದರು. ಸದ್ಯ ನೀತಿ ಆಯೋಗದ ಸದ್ಯರಾಗಿದ್ದು, ಇ ಪಾವತಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಂ5: ಇನ್‌ಫೋಸಿಸ್‌ಮತ್ತೊಬ್ಬ ಸಹ ಸಂಸ್ಥಾಪಕ ಕೆ.ದಿನೇಶ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರ ಕುಟುಂಬದ ಒಟ್ಟು ಆಸ್ತಿ 5,730 ಕೋಟಿ ರೂ.

ನಂ6: ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕರ ಕುಟುಂಬದ ವಿ.ಜಿ ಸಿದ್ಧಾರ್ಥ ಟಾಪ್‌10 ಪಟ್ಟಿಯ 6ನೇ ಸಿರಿವಂತ ಕನ್ನಡಿಗ. ಆರಂಭದಲ್ಲಿ ಕಾಫಿ ತೋಟದ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿರದ ಸಿದ್ಧಾರ್ಥ ಷೇರು ಪೇಟೆ ಬಗ್ಗೆ ಗಮನಹರಿಸಿದ್ದರು. ಅದರಲ್ಲಿ ಗಳಿಸಿದ್ದ ಸ್ವಲ್ಪ ಹಣವನ್ನು ಕಾಫಿ ತೋಟ ಕೊಳ್ಳಲು ಬಳಸಿದ್ದರು. ಈಗ ಅವರು ದೇಶದ ಅತಿ ದೊಡ್ಡ ಕಾಫಿ ರಫ್ತುದಾರರು. ಸಿಂಗಾಪುರದ ಕಫೆಯಲ್ಲಿ ಬೀರ್‌ಹೀರುತ್ತಾ ಇಂಟರ್ನೆಟ್‌ ಬ್ರೌಸ್‌ ಮಾಡುವವರನ್ನು ಕಂಡ ಇವರಿಗೊಂದು ಐಡಿಯಾ ಹೊಳೆಯಿತು. 90ರ ದಶಕದಲ್ಲಿ ಬೆಂಗಳೂರಿನಲ್ಲಿ ಆಗಷ್ಟೇ ಕಣ್ಣುಬಿಡುತ್ತಿದ್ದ ಸಾಫ್ಟ್‌ವೇರ್‌ಕಂಪನಿಗಳ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಬ್ರಿಗೇಡ್‌ರಸ್ತೆಯಲ್ಲಿ ಕಫೆ ಆರಂಭಿಸಿದ್ದರು. ಈಗ ದೇಶಾದ್ಯಂತ 1650 ಕಾಫಿ ಮಳಿಗೆಗಳಿವೆ.

ನಂ7: ದಕ್ಷಿಣ ಭಾರತದ ಅತಿ ದೊಡ್ಡ ಪ್ರಾಪರ್ಟಿ ಡವೆಲಪರ್‌ ಇರ್ಫಾನ್‌ ರಜಾಕ್‌ಪಟ್ಟಿಯಲ್ಲಿ 7 ಸ್ಥಾನದಲ್ಲಿದ್ದಾರೆ. ಇವರ ತಾತ ಕಚ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಇವರ ಕುಟುಂಬ ಕಮರ್ಷಿಯಲ್‌ಸ್ಟ್ರೀಟ್‌ನಲ್ಲಿ ಪುರುಷರ ವಸ್ತ್ರ ಮಾರಾಟ ಮಾಡುವ ಸಣ್ಣ ಅಂಗಡಿ ಹೊಂದಿತ್ತು. ಕಾಲೇಜು ಮುಗಿಸಿದ ನಂತರ ಕುಟುಂಬದ ಉದ್ಯಮದಲ್ಲಿ ತೊಡಗಿಕೊಂಡ ರಜಾಕ್ 1981ರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡಿದರು. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಇವರ ಪ್ರೆಸ್ಟೀಜ್‌ ಸಂಸ್ಥೆಗೆ ದೊಡ್ಡ ಹೆಸರಿದೆ. ಇವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 4,560 ಕೋಟಿ ರೂ.

ನಂ8: ನಾರಾಯಣ ಹೃದಯಾಲಯದ ಸಂಸ್ಥಾಪಕ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿಗೆ 8ನೇ ಸ್ಥಾನ. ಮಂಗಳೂರು ಮೂಲದ ದೇವಿ ಶೆಟ್ಟಿ ಮೈಸೂರು ವಿಶ್ವವಿದ್ಯಾಲಯದಿಂದ 1982ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಗ್ಲೆಂಡ್‌ನ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ತರಬೇತಿ ಪಡೆದು 1989ರಲ್ಲಿ ದೇಶಕ್ಕೆ ವಾಪಸಾದವರು 2000ನೇ ಇಸವಿಯಲ್ಲಿ ನಾರಾಯಣ ಹೃದಯಾಲಯ ಸ್ಥಾಪಿಸಿದರು. ಇವರ ಸಂಸ್ಥೆಯ ಒಟ್ಟು ಆಸ್ತಿ ಮೌಲ್ಯ 1 ಶತಕೋಟಿ ಡಾಲರ್‌.

ನಂ9: ಕ್ವಸ್ಟ್‌ಗ್ಲೋಬರ್‌ಸಹ ಸಂಸ್ಥಾಪಕ ಅಜಿತ್‌ಪ್ರಭು. ಇನ್‌ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳು ಹೊರಗುತ್ತಿಗೆ ನೀಡಲು ಆರಂಭಿಸಿದ ಸಂದರ್ಭದಲ್ಲಿ ತಲೆ ಎತ್ತಿದ ಸಂಸ್ಥೆಯೇ ಕ್ವೆಸ್ಟ್‌. ಪ್ರಭು ಹಾಗೂ ಅವರ ಸ್ನೇಹಿತ ಅರವಿಂದ್‌ಮಲ್ಲಿಗೇರಿ 1997ರಲ್ಲಿ ಕ್ವೆಸ್ಟ್‌ಸಂಸ್ಥೆ ಆರಂಭಿಸಿದರು. ಹುಬ್ಬಳ್ಳಿ ಮೂಲದ ಗೆಳೆಯರು ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹುಬ್ಬಳಿಯಲ್ಲೇ ಎಂಜಿನಿಯರಿಂಗ್‌ಪದವಿ ಪಡೆದ ಸ್ನೇಹಿತರು ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ತೆರಳಿದರು. ಅಲ್ಲೇ ಕೆಲಸಕ್ಕೂ ಸೇರಿದ್ದರು. ‘ಮೊದಲ ಬಾರಿಗೆ ಇಂಗ್ಲೀಷ್‌ಮಾತನಾಡಿದ್ದೇ ಅಮೆರಿಕದಲ್ಲಿ’ ಎನ್ನುತ್ತಾರೆ ಪ್ರಭು. ಇವರ ಸಂಸ್ಥೆಯ ಒಟ್ಟು ಆಸ್ತಿ ಮೌಲ್ಯ ಸುಮಾರು 2,600 ಕೋಟಿ ರೂ.

ನಂ10: ಟಾಪ್‌10 ಪಟ್ಟಿಯ ಮೊದಲ ಹಾಗೂ ಕೊನೆಯ ವ್ಯಕ್ತಿ ಬಂಟ ಸಮುದಾಯದವರು. 10ನೇ ಸ್ಥಾನದಲ್ಲಿರುವ ಶಶಿಕಿರಣ್‌ ಶೆಟ್ಟಿ, ಮಂಗಳೂರಿನ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಪದವಿ ಪಡೆದು ಉದ್ಯೋಗ ಅರಸಿ ಮುಂಬಯಿಗೆ ತೆರಳಿದ್ದರು. ಸಾರಿಗೆ ಹಾಗೂ ಷೇರು ಉದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದ ಶೆಟ್ಟಿ 25,000ರೂ ಬಂಡವಾಳದೊಂದಿಗೆ ಇಂಟರ್‌ ಮಾಡಲ್‌ ಟ್ರಾನ್ಸ್‌ಪೋರ್ಟ್‌ ಆಂಡ್‌ ಫ್ರೈಟ್‌ಸರ್ವೀಸ್‌ ಆರಂಭಿಸಿದ್ದರು. ಇಂದು ಅವರ ಉದ್ದಿಮೆ 160 ದೇಶಗಳಿಗೆ ವಿಸ್ತರಿಸಿದೆ. 2014ರಲ್ಲಿ ಬಾಲಿವುಡ್‌ನಟ ದಿ. ರಾಜೇಶ್‌ ಖನ್ನಾ ಅವರ ಬಂಗಲೆ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಇವರ ಒಟ್ಟು ಆಸ್ತಿ ಮೌಲ್ಯ 3,040 ಕೋಟಿ ರೂ.
(ವಿಕ)

Comments are closed.