ಕರ್ನಾಟಕ

ಪೊಲೀಸರ ಸೋಗಿನಲ್ಲಿ ಉದ್ಯಮಿ ಅಪಹರಣ: ಮೂವರ ಸೆರೆ

Pinterest LinkedIn Tumblr


ಬೆಂಗಳೂರು, ಜ. ೬- ಹಣಕಾಸು ವ್ಯವಹಾರ ನಡೆಸುತ್ತಿದ್ದ ಉದ್ಯಮಿ ಹರಿ ಎಂಬುವವರನ್ನು ತೆಲಂಗಾಣ ಪೊಲೀಸರ ಸೋಗಿನಲ್ಲಿ ಅಪಹರಿಸಿ ಲಕ್ಷಾಂತರ ರೂ.ಗಳ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶ ಮೂಲದ ಮಹಮ್ಮದ್ ವಸೀಂ(35), ಮಹಮ್ಮದ್ ಅಬ್ದುಲ್ ಜಮೀರ್(38), ಹೊರಮಾವುವಿನ ಸಯ್ಯದ್ ವಾಸಿಫ್(46) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಹರಿ ಅವರನ್ನು ರಕ್ಷಿಸಿ ಮನೆಗೆ ಕಳುಹಿಸಲಾಗಿದೆ ಎಂದು ಈಶಾನ್ಯ ವಲಯದ ಡಿಸಿಪಿ ಡಾ. ಪಿ.ಎಸ್. ಹರ್ಷಾ ಅವರು ತಿಳಿಸಿದ್ದಾರೆ.
ಬಾಗಲೂರಿನ ವಿನಾಯಕ ನಗರದ ಉದ್ಯಮಿ ಹರಿ ಅವರನ್ನು ಎರಡು ದಿನಗಳ ಹಿಂದೆ ತೆಲಂಗಾಣ ಪೊಲೀಸರ ಸೋಗಿನಲ್ಲಿ ಅಪಹರಿಸಿ ಯಲಹಂಕ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ನಂಬಿಸಿ ಸಾದಹಳ್ಳಿಗೆ ಕರೆದುಕೊಂಡು ಹೋಗಿ ಕೊಠಡಿಯೊಂದರಲ್ಲಿ ಕೂಡಿಹಾಕಿ ಹಿಂಸಿಸಿದ್ದರು.
ಹರಿ ಅವರಿಂದ ಹಣ ಪಡೆದುಕೊಳ್ಳಲು ಅವರ ಪತ್ನಿಗೆ ಅವರಿಂದ ಫೋನ್ ಮಾಡಿಸಿ ತಾನು ಕಳುಹಿಸುವ ಹು‌ಡುಗನ ಕೈಲಿ ಚೆಕ್ ಪುಸ್ತಕಗಳನ್ನು ಕಳುಹಿಸುವಂತೆ ಹೇಳಿಸಿದ್ದರು.
ಈ ಸಂಬಂಧ ಹರಿ ಅವರ ಪತ್ನಿ ಸೌಜನ್ಯ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಹರಣ ನಡೆದ ಕೇವಲ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Comments are closed.