ಕರ್ನಾಟಕ

ರಾಜ್ಯ ಹೈಕೋರ್ಟ್ ಅನ್ನೂ ಬಿಡದ ಇಂಟರ್ ನೆಟ್ ಟ್ರೋಲರ್ ಗಳು

Pinterest LinkedIn Tumblr

High-Court-of-Karnataka-700
ಬೆಂಗಳೂರು: ಇಂಟರ್ ನೆಟ್ ಟ್ರೋಲರ್ ಗಳು ಬಹುಶಃ ಯಾವ ವಿಷಯಗಳನ್ನೂ ಟ್ರೋಲ್ ಮಾಡದೇ ಬಿಟ್ಟಿಲ್ಲ. ಈಗ ಟ್ರೋಲ್ ಪಟ್ಟಿಗೆ ಹೈಕೋರ್ಟ್ ಸಹ ಸೇರ್ಪಡೆಯಾಗಿದೆ ಎಂದರೆ ನೀವು ನಂಬಲೇ ಬೇಕು. ಫೇಸ್ ಬುಕ್ ನಲ್ಲಿ ಬೆಂಗಳೂರು ಹೈಕೋರ್ಟ್ ಗಾಗಿ ಶೋಧಿಸಿದರೆ ಕೆಲವು ಅಸಂಬದ್ಧ ಪೋಸ್ಟ್ ಗಳಿರುವ ಪೇಜ್ ಕಾಣಿಸುತ್ತದೆ.
ಕರ್ನಾಟಕ ಹೈಕೋರ್ಟ್ ನ ಫೋಟೊ, ಹೆಸರು ಇರುವ ಪೇಜ್ ಗೆ 5,000 ಅನುಯಾಯಿಗಳಿದ್ದು, ನಗರದಲ್ಲಿ ದಿನನಿತ್ಯ ನಡೆಯುವ ಬೆಳವಣಿಗೆಗಳ ಬಗ್ಗೆ ವ್ಯಂಗ್ಯ, ಹಾಸ್ಯವಾಗಿ ಪೋಸ್ಟ್ ಮಾಡಲಾಗುತ್ತಿದೆ. ಚಳಿಗಾಲದಲ್ಲಿ ತೆರೆದಿರುವ ಶಾಲೆಗಳನ್ನು ಧ್ವಂಸ ಮಾಡಬಹುದಾಗಿದೆ ಹಾಗೂ ಮೀಟರ್ ರೀಡಿಂಗ್ ಗೆ ಸರಿಯಾಗಿ ಹಣ ಪಡೆಯುವ ಆಟೋ ಚಾಲಕನಿಗೆ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂಬಂತಹ ವ್ಯಂಗ್ಯಭರಿತ ಪೋಸ್ಟ್ ಗಳನ್ನು ಹಾಕಿ ಟ್ರೋಲರ್ ಗಳು ಹೈಕೋರ್ಟ್ ನ ಆದೇಶಗಳ ಮಾದರಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ ಸಿವಿ ನಾಗೇಶ್, ಹೈಕೋರ್ಟ್ ಹೆಸರಿನಲ್ಲಿ ಪೇಜ್ ಕ್ರಿಯೇಟ್ ಮಾಡಿ ಅಸಂಬದ್ಧ ಪೋಸ್ಟ್ ಗಳನ್ನು ಅಪ್ ಡೇಟ್ ಮಾಡುವುದು ಗಂಭೀರ ಅಪರಾಧವಾಗಿದೆ. ಅಷ್ಟೇ ಅಲ್ಲದೇ ಕ್ರಿಮಿನಲ್ ಕಾಯ್ದೆಯಡಿ ಅಪರಾಧ ಪ್ರಕರಣ ದಾಖಲಿಸಬಹುದಾಗಿದ್ದು, ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಅಥವಾ ಹೈಕೋರ್ಟ್ ಸೈಬರ್ ಕ್ರೈಮ್ ಪೊಲೀಸರಿಗೆ ನಿರ್ದೇಶನ ನೀಡಬಹುದೆಂದು ಹೇಳಿದ್ದಾರೆ.
ಹೈಕೋರ್ಟ್ ಹೆಸರಿನಲ್ಲಿ ಅಸಂಬದ್ಧ ವಾಕ್ಯಗಳನ್ನು ಪೋಸ್ಟ್ ಮಾಡುವುದು ಅಪರಾಧವಾಗಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದರಿಂದ ಸೈಬರ್ ಕ್ರೈಂ ಪೊಲೀಸರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸಿವಿ ನಾಗೇಶ್ ಹೇಳಿದ್ದಾರೆ. ಹೈಕೋರ್ಟ್ ನ ನಕಲಿ ಪೇಜ್ ನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹೈಕೋರ್ಟ್ ನ ರಿಜಿಸ್ಟಾರ್ ಜನರಲ್ ಅಶೋಕ್ ನಿಜಗಣನವರ್ ಗಮನಕ್ಕೆ ತಂದಿದ್ದು, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Comments are closed.