ಕರ್ನಾಟಕ

ಜನವರಿ 15ರೊಳಗೆ ಅಡುಗೆ ಅನಿಲ ವಿತರಣೆ ನಗದುರಹಿತ

Pinterest LinkedIn Tumblr

LPG
ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು 20 ದಿನಗಳೊಳಗೆ ನಗರದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ವಿತರಣೆಯ ಎಲ್ಲ ವಹಿವಾಟು ಸಂಪೂರ್ಣ ನಗದುರಹಿತ ಆಗಲಿದೆ. ಈ ಯೋಜನೆಯನ್ನು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬಿರುಸಿನ ಸಿದ್ಧತೆ ಆರಂಭಿಸಿದೆ.

ಸಚಿವಾಲಯದ ಉಪ ಕಾರ್ಯದರ್ಶಿ ಕೆ.ಎಂ.ಮಹೇಶ್‌ ಅವರು ಈ ಕುರಿತು ಸೋಮವಾರ ನಗರದ ಅಡುಗೆ ಅನಿಲ ವಿತರಣಾ ಏಜೆನ್ಸಿಗಳ ಮಾಲೀಕರು, ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌, ಭಾರತ್‌ ಪೆಟ್ರೊಲಿಯಂ ಕಾರ್ಪೊರೇಷನ್‌ ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಕಂಪೆನಿಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

‘ನಗದುರಹಿತ ಆರ್ಥಿಕ ವ್ಯವಸ್ಥೆಯನ್ನು ಹೊಂದುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೂ ಕೈಜೋಡಿಸುತ್ತಿದೆ. ಇಲಾಖೆಯ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರ ಸೂಚನೆ ಮೇರೆಗೆ ಎಲ್‌ಪಿಜಿ ವಿತರಣೆಯನ್ನು ಸಂಪೂರ್ಣ ನಗದುರಹಿತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ’ ಎಂದು ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶದಲ್ಲಿ ನಿತ್ಯ ಸರಾಸರಿ 40 ಲಕ್ಷ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ನಿತ್ಯ ಸರಾಸರಿ ₹ 2 ಸಾವಿರ ಕೋಟಿಯಷ್ಟು ನಗದು ಕೈ ಬದಲಾಯಿಸುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ನಗದುರಹಿತವಾಗಿ ನಡೆಯುವಂತೆ ಮಾಡುವುದು ನಮ್ಮ ಉದ್ದೇಶ. ಇದರ ಮೊದಲ ಹೆಜ್ಜೆಯನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂದು ಗುರುತಿಸಿಕೊಂಡ ಬೆಂಗಳೂರಿನಿಂದ ಆರಂಭಿಸುತ್ತಿದ್ದೇವೆ. ಇಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ’ ಎಂದರು.

ಸವಾಲುಗಳೇನು?
‘ನೆಟ್‌ಬ್ಯಾಂಕಿಂಗ್‌ ಸೌಲಭ್ಯ ಹೊಂದಿದವರು ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್ ಕಾರ್ಡ್‌ ಬಳಸಿ ಆನ್‌ಲೈನ್‌ ಮೂಲಕ ನಗದುರಹಿತ ಪಾವತಿ ಮಾಡಲು ಈ ಹಿಂದೆಯೇ ಅವಕಾಶ ಕಲ್ಪಿಸಲಾಗಿತ್ತು. ಈಗ ಮೊಬೈಲ್‌ ವಾಲೆಟ್‌ ಮೂಲಕವೂ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಗ್ರಾಹಕರು ನೆಟ್‌ಬ್ಯಾಂಕಿಂಗ್‌ ಅಥವಾ ಮೊಬೈಲ್ ವಾಲೆಟ್‌ ಬಳಸುತ್ತಾರೆ ಎಂದು ನಿರೀಕ್ಷೆ ಮಾಡಲಾಗದು. ಪಾವತಿ ವ್ಯವಸ್ಥೆ ಇನ್ನಷ್ಟು ಸುಲಭವಾಗಬೇಕು ಎಂಬ ಉದ್ದೇಶದಿಂದ ಸಿಲಿಂಡರ್‌ಗಳನ್ನು ಮನೆ ಮನೆಗೆ ಸರಬರಾಜು ಮಾಡುವವರ ಕೈಯಲ್ಲಿ ಪಿಒಎಸ್‌ ಯಂತ್ರವನ್ನು ನೀಡಲು ನಿರ್ಧರಿಸಿದ್ದೇವೆ’ ಎಂದರು.

‘ಒಂದು ವಿತರಣಾ ಏಜೆನ್ಸಿ ಏನಿಲ್ಲವೆಂದರೂ 20ರಿಂದ 30 ಪಿಒಎಸ್‌ ಯಂತ್ರ ಹೊಂದಬೇಕಾಗುತ್ತದೆ. ಈ ಯಂತ್ರವನ್ನು ಬಾಡಿಗೆ ರೂಪದಲ್ಲಿ ಬ್ಯಾಂಕ್‌ಗಳೇ ಒದಗಿಸಲಿವೆ. ನಗರದ 30ಕ್ಕೂ ಹೆಚ್ಚು ವಿತರಕರು ಈಗಾಗಲೇ ಪಿಒಎಸ್‌ ಯಂತ್ರ ಖರೀದಿಸಿದ್ದಾರೆ. ನಗರದಲ್ಲಿರುವ 145 ವಿತರಣಾ ಏಜೆನ್ಸಿಗಳೂ ಜನವರಿ 15ರ ಒಳಗೆ ಪಿಒಎಸ್‌ ಯಂತ್ರ ಬಳಸಲಿವೆ’ ಎಂದರು.

‘ನಗದುರಹಿತ ವಹಿವಾಟಿನಿಂದ ಗ್ರಾಹಕರಿಗೆ ಅನೇಕ ಪ್ರಯೋಜನಗಳಿವೆ. ಅಡುಗೆ ಅನಿಲ ಸಿಲಿಂಡರ್‌ಗೆ ₹ 585 ದರ ಇದೆ. ಸಿಲಿಂಡರ್‌ ಸರಬರಾಜು ಮಾಡುವವರು ಗ್ರಾಹಕರಿಗೆ ಸರಿಯಾಗಿ ಚಿಲ್ಲರೆ ನೀಡುತ್ತಿಲ್ಲ ಎಂಬ ಬಗ್ಗೆ ದೂರುಗಳಿದ್ದವು. ಈ ಸಮಸ್ಯೆ ನೀಗಲಿದೆ. ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಾದರೆ, ಆನ್‌ಲೈನ್‌ ಮೂಲಕ ಹಣ ಪಾವತಿಸಿ, ಪಕ್ಕದ ಮನೆಯವರ ಬಳಿ ಸಿಲಿಂಡರ್‌ ನೀಡುವಂತೆ ವಿತರಕರಲ್ಲಿ ಕೋರಬಹುದು’ ಎಂದು ಅವರು ನಗದುರಹಿತ ವಹಿವಾಟಿನ ಪ್ರಯೋಜನಗಳನ್ನು ವಿವರಿಸಿದರು.

‘ವಿತರಣಾ ಏಜೆನ್ಸಿಗಳಿಗೂ ಸಾಕಷ್ಟು ಪ್ರಯೋಜನಗಳಿವೆ. ಒಂದು ಏಜೆನ್ಸಿ ಮೂಲಕ ನಿತ್ಯ ಸರಾಸರಿ ₹ 5 ಲಕ್ಷದಿಂದ ₹ 10 ಲಕ್ಷದಷ್ಟು ನಗದು ವ್ಯವಹಾರ ನಡೆಯುತ್ತಿತ್ತು. ನಗದುರಹಿತ ವಹಿವಾಟಿನಿಂದ ಇಷ್ಟೊಂದು ದೊಡ್ಡ ಮೊತ್ತದ ನಿರ್ವಹಣೆ ಸುಲಭವಾಗಲಿದೆ’ ಎಂದರು.

‘ಪಿಒಎಸ್‌ ಯಂತ್ರದ ಮೂಲಕ ನಡೆಸುವ ₹1ಸಾವಿರದವರೆಗಿನ ಪಾವತಿಗೆ ಶೇ 0.25 ವಹಿವಾಟು ಶುಲ್ಕ ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಕಡಿತವಾಗುತ್ತಿದೆ. ಇದನ್ನು ರದ್ದುಪಡಿಸುವುದು ಆರ್‌ಬಿಐ ವಿವೇಚನೆಗೆ ಬಿಟ್ಟಿದ್ದು. ಮೊಬೈಲ್ ವ್ಯಾಲೆಟ್‌ ಮೂಲಕ ಪಾವತಿಸುವಾಗ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ’ ಎಂದರು.

ಪ್ರೋತ್ಸಾಹ ಧನ?: ಸದ್ಯ ಪೆಟ್ರೋಲ್‌ ಬಂಕ್‌ಗಳಲ್ಲಿ ಪಿಒಎಸ್‌ ಯಂತ್ರದ ಮೂಲಕ ಪಾವತಿಸುವ ಗ್ರಾಹಕರಿಗೆ ಪ್ರತಿ ₹ 100ಕ್ಕೆ 75 ಪೈಸೆ ಪ್ರೋತ್ಸಾಹ ಧನವನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಅಡುಗೆ ಅನಿಲ ಸಿಲಿಂಡರ್‌ನ ನಗದುರಹಿತ ಪಾವತಿಗೂ ಪ್ರೋತ್ಸಾಹಧನ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
*
ಗ್ರಾಹಕರಿಗೇನು ಪ್ರಯೋಜನ?

* ಚಿಲ್ಲರೆ ಸಮಸ್ಯೆ ಇರುವುದಿಲ್ಲ
* ಸಿಲಿಂಡರ್‌ ವಿತರಣಾ ಸಿಬ್ಬಂದಿ ನಿಖರವಾದ ಮೊತ್ತವನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ
* ಹಣ ಪಾವತಿ ದಾಖಲಾಗಲಿದೆ
* ಪಿಒಎಸ್‌ ಯಂತ್ರದ ಮೂಲಕ ಪಾವತಿ ಸುಲಭ
* ಕಾಯ್ದಿರಿಸಿದ ಸಿಲಿಂಡರ್‌ ಪೂರೈಕೆ ಆಗದಿದ್ದರೆ ಹಣ ಮರುಪಾವತಿ ಆಗಲಿದೆ
ವಿತರಕರಿಗೆ ಏನು ಪ್ರಯೋಜನ
* ಲಕ್ಷಾಂತರ ಮೊತ್ತದ ನಗದು ವ್ಯವಹಾರದ ಸಮಸ್ಯೆ ತಪ್ಪಲಿದೆ.
* ಕಳ್ಳ ನೋಟು ಹಾವಳಿ ಇರುವುದಿಲ್ಲ
* ವಹಿವಾಟಿನ ಲೆಕ್ಕ ಇಡುವುದು ಸುಲಭ
* ನಗದು ಠೇವಣಿ ಮಾಡಲು ನಿತ್ಯ ಬ್ಯಾಂಕ್‌ಗೆ ಅಲೆಯಬೇಕಿಲ್ಲ
* ನೋಟು ಹರಿದು ಹೋಗುವ ಚಿಂತೆ ಇರದು
*
ಪಾವತಿ ಹೇಗೆ?

* ಪಿಒಎಸ್‌ ಯಂತ್ರದ ಮೂಲಕ (ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ)
* ಮೊಬೈಲ್‌ ವಾಲೆಟ್‌ ಮೂಲಕ
* ನೆಟ್‌ಬ್ಯಾಂಕಿಂಗ್‌ ಮೂಲಕ ಆನ್‌ಲೈನ್‌ ಪಾವತಿ
* * *
ಅಡುಗೆ ಅನಿಲ ವಿತರಣೆಗೆ ನಗದುರಹಿತ ವ್ಯವಸ್ಥೆ ಜಾರಿಗೊಳಿಸಲು ಬೆಂಗಳೂರು ಸೂಕ್ತ. ಕ್ರಮೇಣ ರಾಜ್ಯದ 970 ವಿತರಣಾ ಏಜೆನ್ಸಿಗಳಿಗೂ ವಿಸ್ತರಿಸುತ್ತೇವೆ.
ಕೆ.ಎಂ.ಮಹೇಶ್‌,
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಉಪಕಾರ್ಯದರ್ಶಿ
*
ಅಂಕಿ ಅಂಶ
₹7ಲಕ್ಷ ಕೋಟಿ ದೇಶದಲ್ಲಿ ಅಡುಗೆ ಅನಿಲ ವಿತರಣೆ ವಾರ್ಷಿಕ ವಹಿವಾಟು
40 ಲಕ್ಷ ದೇಶದಲ್ಲಿ ಪ್ರತಿದಿನ ವಿತರಿಸುವ ಸರಾಸರಿ ಅಡುಗೆ ಅನಿಲ ಸಿಲಿಂಡರ್‌ಗಳ ಸಂಖ್ಯೆ
145 ಅಡುಗೆ ಅನಿಲ ವಿತರಣಾ ಏಜೆನ್ಸಿಗಳು ಬೆಂಗಳೂರಿನಲ್ಲಿವೆ
70 ಸಾವಿರ ನಗರದಲ್ಲಿ ಪ್ರತಿದಿನ ವಿತರಣೆ ಆಗುವ ಸಿಲಿಂಡರ್‌ಗಳ ಸರಾಸರಿ ಸಂಖ್ಯೆ

Comments are closed.