ರಾಷ್ಟ್ರೀಯ

ನೋಟು ನಿಷೇಧದಿಂದ ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲ; ರಾಹುಲ್ ಗಾಂಧಿ

Pinterest LinkedIn Tumblr

rahul
ನವದೆಹಲಿ: ದೇಶದಲ್ಲಿರುವ ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರು. ಅವರ ಈ ನೀತಿ ವಿಫಲವಾಗಿದೆ.

ನೋಟು ರದ್ದತಿಯಿಂದಾಗಿ ಕಪ್ಪು ಹಣ, ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲ. ಅದರ ಬದಲು ಬಡವರು ಇನ್ನಷ್ಟು ಕಂಗಾಲಾಗಿದ್ದಾರೆ. ರದ್ದಾದ ನೋಟುಗಳ ಬದಲಾವಣೆ ಮಾಡುವುದಕ್ಕಾಗಿಯೇ ಕಾಳ ದಂಧೆಯೊಂದು ಹೊಸತಾಗಿ ಹುಟ್ಟಿಕೊಂಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೃಷಿಗೆ ಬೇಕಾಗಿರುವ ವಸ್ತುಗಳನ್ನು, ಬಿತ್ತನೆ ಬೀಜಗಳನ್ನು ಖರೀದಿಸಲು ರೈತರೈ ಕೈಯಲ್ಲಿ ದುಡ್ಡಿಲ್ಲ. ದುಡ್ಡು ಕೊಡದೆ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಕೊಡುವುದಿಲ್ಲ. ಬಡವರು ಸಂಕಷ್ಟದಲ್ಲಿದ್ದಾರೆ, ಹೀಗಿರುವಾಗ ಸಾಮಾನ್ಯ ಜನರ ಕಷ್ಟಗಳಿಗೆ ಪ್ರಧಾನಿ ಮೋದಿ ಸ್ಪಂದಿಸಬೇಕು.

2014ರಿಂದ ಮುಂಚೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾರ್ಪರೇಟ್ ಕಂಪನಿಗಳು ಅವರಿಗೆ ಬಹುದೊಡ್ಡ ಮೊತ್ತವನ್ನು ಪಾವತಿಸಿದ್ದವು ಎಂದು ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಿಂದ ತಿಳಿದು ಬಂದಿದೆ, ಆದಿತ್ಯ ಬಿರ್ಲಾ ಕಂಪನಿ ಮೇಲೆ ಐಟಿ ದಾಳಿ ನಡೆದಿದ್ದು, ಪ್ರಸ್ತುತ ಕಂಪನಿ ಮೋದಿಯವರಿಗೆ ₹12 ಕೋಟಿ ಪಾವತಿ ಮಾಡಿತ್ತು. ಸಹಾರಾ ಕಂಪನಿ ಮೋದಿಯವರಿಗೆ ₹40 ಕೋಟಿ ಪಾವತಿ ಮಾಡಿತ್ತು ಎಂಬುದು ಬಹಿರಂಗವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ರಾಹುಲ್ ಗಾಂಧಿಯವರೊಂದಿಗೆ ಇಂದು ವಿಪಕ್ಷಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದವು. ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೋಟು ರದ್ದತಿ ಮತ್ತು ಹೊಸ ನೋಟು ಚಲಾವಣೆ ಎರಡೂ ದೊಡ್ಡ ಹಗರಣಗಳಾಗಿವೆ. ಕೇಂದ್ರ ಸರ್ಕಾರ ಬಡವರ ಹಣವನ್ನು ಲೂಟಿ ಮಾಡಿ, ಸಿರಿವಂತರಿಗೆ ಸಾಲ ರೂಪದಲ್ಲಿ ನೀಡುತ್ತಿದೆ ಎಂದು ದೂರಿದ್ದಾರೆ.

ನೋಟು ಸಮಸ್ಯೆ 50 ದಿನಗಳಲ್ಲಿ ಮುಗಿಯುತ್ತದೆ ಎಂದು ಮೋದಿ ಹೇಳಿದ್ದರು. ಒಂದು ವೇಳೆ 50 ದಿನಗಳ ನಂತರವೂ ಈ ಸಮಸ್ಯೆ ಪರಿಹಾರವಾಗದೇ ಇದ್ದರೆ, ಪ್ರಧಾನಿಯವರು ರಾಜೀನಾಮೆ ನೀಡುತ್ತಾರೆಯೇ?

ನಗದು ರಹಿತ ಆರ್ಥಿಕತೆಯನ್ನು ಜಾರಿಗೆ ತರುವ ನೆಪದಲ್ಲಿ ಮೋದಿ ಸರ್ಕಾರ ಆಧಾರ ರಹಿತ ಕೆಲಸ ಮಾಡುತ್ತಿದೆ. ಇದೆಲ್ಲವೂ ಅವರಿಗೆ ಹೊಡೆತ ನೀಡಲಿದೆ. ಇದೀಗ ದೇಶದಲ್ಲಿರುವುದು ತುರ್ತು ಪರಿಸ್ಥಿತಿ ಅಲ್ಲ, ಸೂಪರ್ ತುರ್ತು ಪರಿಸ್ಥಿತಿ. ಇದನ್ನು ಅಧಿಕೃತವಾಗಿ ಘೋಷಿಸಿಲ್ಲ ಅಷ್ಟೇ ಎಂದು ಮಮತಾ ಕಿಡಿಕಾರಿದ್ದಾರೆ.

Comments are closed.