ಬೆಂಗಳೂರು: ‘ಒನ್ ಇಂಡಿಯನ್ ಗರ್ಲ್ ಕಾದಂಬರಿ ಬರೆಯುವ ಸಂದರ್ಭದಲ್ಲಿ ನಾನು ಯುವತಿಯಂತೆಯೇ ವರ್ತಿಸುತ್ತಿದೆ. ಹೆಣ್ಣಿನ ನೋವು, ನಲಿವು ಅನುಭವಿಸಿದ್ದೆ. ಇದರಿಂದ ಕಾದಂಬರಿಯೂ ಪರಿಣಾಮಕಾರಿಯಾಗಿ ಮೂಡಿ ಬಂತು’ ಎಂದು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಹೇಳಿದರು.
‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಸುಧಾಮೂರ್ತಿ ಜೊತೆಗಿನ ಸಂವಾದದಲ್ಲಿ ಅವರು ಒನ್ ಇಂಡಿಯನ್ ಗರ್ಲ್‌ನ ಮುಖ್ಯ ಪಾತ್ರ ರಾಧಿಕಾಳಲ್ಲಿ ಪರಕಾಯ ಪ್ರವೇಶ ಮಾಡಿದ್ದನ್ನು ನಿವೇದಿಸಿ ಕೊಂಡರು. ‘ಕೆಲವು ಅನುಭವಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ ’ಎಂದೂ ಸಭಿಕರನ್ನು ಕುತೂಹಲಕ್ಕೆ ದೂಡಿದರು.
‘ಮಹಿಳೆಯ ಬಗ್ಗೆ ಮಹಿಳೆಯಂತೆ ಅನುಭಾವಿಸಿ ಬರೆಯಲು ಸಿಕ್ಕ ಒಂದು ಅತ್ಯುತ್ತಮ ಅವಕಾಶ. ಮುಂದೆ ಇಂತಹ ಅವಕಾಶ ನನಗೆ ಸಿಗುವುದಿಲ್ಲ’ ಎಂದರು.
ಕಾದಂಬರಿಯಲ್ಲಿ ಲೈಂಗಿಕ ಸಾಮೀಪ್ಯಕ್ಕೆ ಕುರಿತ ಕೆಲವು ಪುಟಗಳು ತೀರಾ ಮುಜುಗರ ಹುಟ್ಟಿಸುತ್ತವೆ ಎಂಬ ಸುಧಾಮೂರ್ತಿ ಆಕ್ಷೇಪಕ್ಕೆ, ‘ಒಬ್ಬ ಮಹಿಳೆ ತನ್ನದೇ ಆದ ಲೈಂಗಿಕ ಬಯಕೆಗಳನ್ನು ಹೊಂದುವುದರಲ್ಲಿ ತಪ್ಪೇನಿದೆ. ಆಕೆ ಒಬ್ಬ ಪುರುಷನನ್ನು ಪ್ರೀತಿಸಿದರೆ ದೊಡ್ಡ ಗುಲ್ಲು ಏಕೆ ಎಬ್ಬಿಸಬೇಕು’ ಎಂದು ಪ್ರಶ್ನಿಸಿದರು.