ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಭ್ರಮೆಯನ್ನು ಹುಟ್ಟಿಸಿದ್ದರು. ಆದ್ರೆ ಇಂದು ಇಡೀ ದೇಶದ ಜನ ಮೋದಿ ವಿರುದ್ಧ ಭ್ರಮನಿರಸನಗೊಂಡಿದ್ದಾರೆ. ಚುನಾವಣೆಗೆ ಮೊದಲು ನೀಡಿದ ಭರವಸೆಯನ್ನು ಈಡೇರಿಸುವ ಪ್ರಯತ್ನವನ್ನ ಮೋದಿ ಮಾಡಿಲ್ಲ. ಎರಡೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ಮೋದಿ ವಚನಭ್ರಷ್ಟರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿಯವರು ಭ್ರಷ್ಟಾಚಾರ ತೊಲಗಿಸುವ ಮಾತನ್ನು ಹೇಳಿದ್ದರು. 50 ದಿನದಲ್ಲಿ ಪ್ರತಿಯೊಬ್ಬರ ಅಕೌಂಟಲ್ಲಿ 15 ಲಕ್ಷ ಹಣ ಹಾಕುವ ಮಾತನ್ನ ಕೂಡ ಹೇಳಿದ್ರು. ಆದ್ರೆ ಇಂದು ಅವರು ವಚನ ಭ್ರಷ್ಟರಾಗಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ ಎಂದು ಕಿಡಿಕಾರಿದರು.
ಸುಳ್ಳು ಹೇಳ್ತಿದ್ದಾರೆ ಮೋದಿ: ವಿರೋಧ ಪಕ್ಷದವರು ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ ಅಂತ ಮೋದಿ ಹೇಳ್ತಾರೆ. ಇದು ಹಸಿ ಸುಳ್ಳು. ದೇಶದ ಜನತೆ ಮುಂದೆ ಕಪ್ಪು ಹಣ ಬಯಲು ಮಾಡ್ತೇನೆ. ನಕಲಿ ನೋಟು, ಭ್ರಷ್ಟಾಚಾರ ನಿಗ್ರಹ ಮಾಡ್ತೇನೆ ಅಂತ ಹೇಳಿದ್ರು. ಇದ್ಯಾವುದಕ್ಕೂ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಯಾಕಂದ್ರೆ ಈ ಹಿಂದೆ ಕೂಡಾ ನೋಟು ಅಮಾನ್ಯ ಮಾಡಿದ ಉದಾಹರಣೆಗಳು ಇದೆ. ಆದರೆ ಅಮಾನ್ಯ ಮಾಡುವ ಮುಂಚೆ ದೇಶದ ಜನರ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಬೇಕಿತ್ತು ಅಂತಾ ಮೋದಿ ವಿರುದ್ಧ ಸಿಎಂ ಹರಿಹಾಯ್ದರು.
ಪ್ರಧಾನಿ ನಗೆಪಾಟಲಿಗೀಡಾಗಿದ್ದಾರೆ: ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್, ಭ್ರಷ್ಟಾಚಾರ ನಿಯಂತ್ರಿಸುತ್ತೇನೆ ಎಂದು ಭರವಸೆ ನೀಡಿದ್ರು. ಆದ್ರೆ ಇದೀಗ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೋಪಗೊಂಡಿದ್ದಾರೆ. ನೋಟ್ ಬ್ಯಾನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜಂಭ ಕೊಚ್ಚಿಕೊಂಡಿದ್ದಾರೆ. ಈ ಎಲ್ಲಾ ಘಟನೆಗಳಿಂದ ಇಂದು ದೇಶದ ಪ್ರಧಾನಿ ನಗೆಪಾಟಲಿಗೆ ಈಡಾಗಿದ್ದಾರೆ ಅಂತಾ ಸಿಎಂ ಹೇಳಿದರು.
ರಾಹುಲ್ ಮುಂದಿನ ಪ್ರಧಾನಿ: ಕಪ್ಪು ಹಣ ಇದ್ದವರು ನಿದ್ದೆಗೆಟ್ಟಿಲ್ಲ, ಸಾಮಾನ್ಯ ಜನ್ರು ಬ್ಯಾಂಕ್ ಮುಂದೆ ಇದ್ದಾರೆ. ಬ್ಯಾಂಕ್ ಮುಂದೆ ಸುತ್ತುವವರು ಬಡವರು, ನಿದ್ದೆಗೆಟ್ಟವರು ಬಡವರು. ಮೊದಲು ಮೋದಿ ಇದನ್ನ ಅರ್ಥ ಮಾಡಿಕೊಳ್ಳಲಿ. ಶೇ.87 ರಷ್ಟು ನೋಟು ಅಮಾನ್ಯ ಮಾಡಿದ್ರಿ. ಶೇ.13 ರಷ್ಟು ಮಾತ್ರ ನೋಟು ಚಲಾವಣೆ ಇವೆ. ಹೀಗಾಗಿ ನೋಟ್ ಅಮಾನ್ಯ ಮಾಡುವುದಕ್ಕೂ ಮೊದಲು ಸಿದ್ಧತೆ ಮಾಡಿಕೊಳ್ಳಲಿಲ್ಲ. ಇದರಿಂದ ಎಲ್ಲವನ್ನ ಹಾಳುಗೆಡವಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಸರ್ಕಾರ ತೊಲಗಬೇಕು. ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಂತಾ ಭರವಸೆ ನೀಡಿದ್ರು.
ಪ್ರಜಾಪ್ರಭುತ್ವ ವಿರುದ್ಧ ಪ್ರಧಾನಿ ನಡೆ: ಕಳೆದ 6 ವರ್ಷಗಳಿಂದ ಬರಗಾಲ ಇದೆ. 139 ಪ್ರದೇಶಗಳನ್ನು ಬರಪೀಡಿತ ಅಂತಾ ಘೋಷಣೆ ಮಾಡಿದ್ದೇವೆ. ಈ ಬಗ್ಗೆ ಪ್ರಧಾನಿಯವರಿಗೂ ಎರಡು ಬಾರಿ ಮನವಿ ನೀಡಿದ್ದೇವೆ. 4207 ಕೋಟಿ ರೂ. ಪರಿಹಾರ ಸಿಗಬೇಕಿದೆ. ಆದ್ರೆ ಪತ್ರ ಬರೆದು ಎರಡು ತಿಂಗಳಾಯಿತು. ದೂರವಾಣಿ ಕರೆ ಮಾಡಿದ್ರೂ ಇವತ್ತಿಗೂ ಸಮಯ ಕೊಟ್ಟಿಲ್ಲ. ಪ್ರಧಾನಿ ನಡೆ ಪ್ರಜಾಪ್ರಭುತ್ವ ವಿರುದ್ಧವಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ವಿರುದ್ಧ ಇಂದಿನಿಂದಲೇ ಹೋರಾಟ: ಈ ಹಿಂದೆ ರಾಹುಲ್ ಗಾಂಧಿ ಬಂದಾಗ 5 ಲಕ್ಷ ಪರಿಹಾರ ನೀಡಲು ಹೇಳಿದ್ರು. ಅದನ್ನು ಈಡೇರಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಮಹದಾಯಿ ನೀರಿನ ಬಗ್ಗೆ ಬಿಜೆಪಿಯವರ ಜೊತೆ ಕೇಳಿದ್ರೆ ಅದು ಟ್ರಿಬ್ಯುನಲ್‍ನಲ್ಲಿ ಇದೆ ಅಂತಾರೆ. ಸುಳ್ಳು ಹೇಳ್ತಾ ಜನರ ಬಳಿ ಓಡಾಡ್ತಾ ಇದ್ದಾರೆ. ಚುನಾವಣೆಗೆ ಹಾಗೂ ಪ್ರಧಾನಿ ವಿರುದ್ಧ ಹೋರಾಟ ಬೆಳಗಾವಿಯ ಇಂದಿನ ಸಮಾವೇಶದಲ್ಲೇ ಆರಂಭಿಸುತ್ತೇವೆ ಅಂತಾ ಸಿಎಂ ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.