ಕರ್ನಾಟಕ

ಪಾಕಿಸ್ತಾನದ ಬಾಲಕಿಗೆ ಬೆಂಗಳೂರಿನಲ್ಲಿ ಅಸ್ಥಿಮಜ್ಜೆ ಕಸಿ

Pinterest LinkedIn Tumblr
Zia Ulla holding his daughter Zeenia (BMT patient) along with Dr. Sunil Bhat is Senior Consultant and Head of Pediatric Hematology, Oncology and Bone Marrow Transplantation service at Mazumdar-Shaw Cancer Center of Narayana Health City in Bengaluru.
Zia Ulla holding his daughter Zeenia (BMT patient) along with Dr. Sunil Bhat is Senior Consultant and Head of Pediatric Hematology, Oncology and Bone Marrow Transplantation service at Mazumdar-Shaw Cancer Center of Narayana Health City in Bengaluru.

ಬೆಂಗಳೂರು: ಪಾಕಿಸ್ತಾನದ ಸಹಿವಾಲ್‌ನ ಎರಡು ವರ್ಷದ ಪುಟ್ಟ ಬಾಲಕಿ ಜಿನಿಯಾಗೆ ಶುಕ್ರವಾರ ಹನ್ನೊಂದು ತಿಂಗಳುಗಳಿಂದ ಅನುಭವಿಸುತ್ತಿದ್ದ ನೋವಿನಿಂದ ಮುಕ್ತಿ ಪಡೆದ ನಿರಾಳಭಾವ. ಅಪ್ಪನ ತೋಳುಗಳಲ್ಲಿ ಬಂದಿಯಾಗಿದ್ದ ಆಕೆ ಮಂದಹಾಸ ಬೀರುತ್ತಿದ್ದಳು.

ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ಒಳಗಾಗಿರುವ ಆಕೆ, ಈಗ ಸಂಪೂರ್ಣ ಚೇತರಿಸಿಕೊಂಡು ತವರಿಗೆ ಮರಳಲು ಸಜ್ಜಾಗಿದ್ದಾಳೆ.

ಅಸ್ಥಿಮಜ್ಜೆಯಲ್ಲಿ ಕಾಣಿಸಿಕೊಂಡ ಸಮಸ್ಯೆಯ ಪರಿಣಾಮ ಅವಳ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿತ್ತು. ಯಕೃತ್ತು ಮತ್ತು ಬೆನ್ನಿನ ನರಗಳು ಹಿಗ್ಗಿದ್ದವು. ನಿರಂತರ ಜ್ವರದ ಕಾಟ ಬೇರೆ. ಚಿಕಿತ್ಸೆಗೆ ಅವಳ ಪಾಲಕರು ಹುಡುಕಿಕೊಂಡು ಬಂದಿದ್ದು ನಗರದ ಆಸ್ಪತ್ರೆಗೆ. ‘ಜಿನಿಯಾಳ ಸಹೋದರ ಎಂಟು ತಿಂಗಳ ರಯಾನ್‌ನ ಅಸ್ಥಿಮಜ್ಜೆ ಆಕೆಗೆ ಹೊಂದಾಣಿಕೆ ಆಗುತ್ತಿತ್ತು. ಆತನಿಂದ ಅಸ್ಥಿ ಮಜ್ಜೆ ಪಡೆಯುವುದು ಸವಾಲಿನ ಕೆಲಸವಾಗಿತ್ತು. ಏಕೆಂದರೆ, ಆ ವಯಸ್ಸಿನ ಮಗುವಿನ ಮೂಳೆಗಳು ತುಂಬಾ ಮೃದುವಾಗಿರುತ್ತವೆ’ ಎಂದು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುನಿಲ್‌ ಭಟ್‌ ಅವರು ಹೇಳಿದರು.

‘ಕಸಿ ಚಿಕಿತ್ಸೆ ಯಶಸ್ವಿಯಾಗಿದ್ದು, ಜಿನಿಯಾ ಪಾಕಿಸ್ತಾನಕ್ಕೆ ಮರಳಲು ಸಜ್ಜಾಗಿದ್ದಾಳೆ. ಅಕ್ಕನ ಜೀವ ಉಳಿಸಲು ನೆರವಾದ ರಯಾನ್‌ ಈಗ ಅತಿ ಕಿರಿಯ ವಯಸ್ಸಿನ ದಾನಿ ಎಂಬ ಹಿರಿಮೆಗೆ ಪಾತ್ರನಾಗಿದ್ದಾನೆ’ ಎಂದು ಹೆಮ್ಮೆಯಿಂದ ಹೇಳಿದರು.

ಸಂಭ್ರಮ ಹಂಚಿಕೊಂಡ ಜಿನಿಯಾ ತಂದೆ ಜಿಯಾ ಉಲ್ಲಾ ಅವರು, ‘ಮಗಳು ಅನುಭವಿಸುತ್ತಿದ್ದ ರೋಗದ ಕುರಿತು ನಮಗೆ ತಪ್ಪು ಗ್ರಹಿಕೆಗಳಿದ್ದವು. ಇದು ವಾಸಿಯಾಗದ ರೋಗ ಎಂದು ತಿಳಿದಿದ್ದೆವು. ವಾಸ್ತವವಾಗಿ ನಾವು ಭರವಸೆಯನ್ನೇ ಕಳೆದುಕೊಂಡಿದ್ದೆವು. ಅದೃಷ್ಟವಶಾತ್, ನಮಗೆ ನಾರಾಯಣ ಹೆಲ್ತ್ ಸಿಟಿಯ ನೆರವು ಸಿಕ್ಕಿತು’ ಎಂದು ಹೇಳಿದರು.

‘ಒಮ್ಮೆ ನಾವು ಪಾಕಿಸ್ತಾನಕ್ಕೆ ವಾಪಸಾದ ಬಳಿಕ ಆನ್‌ಲೈನ್ ಮೂಲಕ ನಮ್ಮ ಅನುಭವವನ್ನು ಸಾರ್ವಜನಿಕರ ಜತೆಗೆ ಹಂಚಿಕೊಳ್ಳಲು ಬಯಸುತ್ತೇವೆ. ಉಳಿದವರಿಗೂ ಇದರಿಂದ ನೆರವಾಗಲಿದೆ’ ಎಂದು ಅವರು ತಿಳಿಸಿದರು.

ಹತ್ತು ವರ್ಷಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಲಾಹೋರ್‌ನ ನೂರ್ ಫಾತಿಮಾಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದನ್ನು ವೈದ್ಯರು ನೆನಪು ಮಾಡಿಕೊಂಡರು.

Comments are closed.