
Karnataka Chief Minister Siddaramaiah
ಬೆಂಗಳೂರು, ನ. ೨೮ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಬ್ಬ ಕೊಲೆಗಡುಕ ಎಂದು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಪ್ರಧಾನಿಯಾಗಿರದಿದ್ದರೆ ಷಾ ಜೈಲಿನಲ್ಲಿ ಇರಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಐಟಿ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಆರೋಪಿಗಳಿಗೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಗಳನ್ನು ಟೀಕಿಸುವ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೋಟು ಎಣಿಕೆ ಮಾಡುವ ಯಂತ್ರಗಳನ್ನು ಇಟ್ಟುಕೊಂಡಿರುವವರನ್ನು ತಮ್ಮ ಪಕ್ಕದಲ್ಲೆ ಕೂರಿಸಿಕೊಂಡು ಮಾತನಾಡುವ ಅಮಿತ್ ಷಾಗೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುವ ಹಕ್ಕಿಲ್ಲ ಎಂದು ಆಪಾದಿಸಿದರು.
ನೋಟು ರದ್ಧತಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಸರಿಯಾದ ಸಿದ್ಧತೆ ನಡೆಸದೆ ಆತುರದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ ಚುನಾವನೆಯಲ್ಲಿ ಬಿಜೆಪಿ ಸೋಲು ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧವೂ ಗದಾ ಪ್ರಹಾರ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹದಾಯಿ, ಕಾವೇರಿ ವಿಚಾರದಲ್ಲಿ ಬಾರಿ ಅನ್ಯಾಯವಾಗಿದೆ ಎಂದು ಹೋದಲೆಲ್ಲಾ ಹೇಳುವ ಬಿಎಸ್‌ವೈ ಅವರು, ಮುಖ್ಯಮಂತ್ರಿಯಾಗಿದ್ದಾಗ ಈ ವಿವಾದ ಬಗೆಹರಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.
ಮಹದಾಯಿ ಟ್ರಿಬುನಲ್ ಮಂಡಳಿ ರಚನೆ ಆಗಿದ್ದೆ ಅವರ ಕಾಲದಲ್ಲೇ ಎಂಬುದನ್ನು ಬಿ.ಎಸ್.ವೈ ಮರೆತಂತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ನಡೆಸುತ್ತಿರುವ `ಆಕ್ರೋಶ್ ದಿವಸ್’ಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸಿಹಿ ಹಂಚುತ್ತಿರುವ ಬಗ್ಗೆ ಗೇಲಿ ಮಾಡಿದ ಸಿದ್ದರಾಮಯ್ಯ ರವರು, ಜನರು ಉದ್ದನೆಯ ಕ್ಯೂನಲ್ಲಿ ನಿಂತು ನೋಟು ಪಡೆಯುತ್ತಿರುವುದಕ್ಕೆ ಕಷ್ಟಪಡುತ್ತಿರುವುದನ್ನು ಕಂಡು ಸಿಹಿ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ `ಬಂದ್’ಗೆ ಕರೆ ನೀಡಿಯೇ ಇಲ್ಲ, ಆದರೂ ಬಿಜೆಪಿ ಮುಖಂಡರು ಅನಗತ್ಯವಾಗಿ ಸಂಭ್ರಮ ಆಚರಿಸಿ ಸಿಹಿ ಹಂಚುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಕೂಡ ಕಪ್ಪು ಹಣವನ್ನು ಬೆಂಬಲಿಸುತ್ತಿಲ್ಲ, ಖೋಟಾನೋಟುಗಳನ್ನು ಮಟ್ಟ ಹಾಕಬೇಕು ಎಂಬುದು ಕೂಡ ಕಾಂಗ್ರೆಸ್‌ನ ಉದ್ದೇಶವಾಗಿದೆ ಎಂದರು.