ಕರ್ನಾಟಕ

ನೋಟು ನಿಷೇಧ ವಿರೋಧಿಸಿ ನಾಳೆ ಬಂದ್ ಇಲ್ಲ… ಕೇವಲ ಪ್ರತಿಭಟನೆ ಮಾತ್ರ ! ಏನಿದೆ ? ಏನಿಲ್ಲ…?

Pinterest LinkedIn Tumblr

bharat-band

ನವದೆಹಲಿ: 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ವೇಳೆ ಬಹತೇಕ ಜನಜೀವನ ಸಾಮಾನ್ಯವಾಗಿರಲಿದ್ದು, ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗುತ್ತಿದೆ.

ಪ್ರಮುಖವಾಗಿ ಕೇಂದ್ರ ನೋಟು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವೇ ನಾಳೆ ಬಂದ್ ಮಾಡುವುದಿಲ್ಲ ಕೇವಲ ಪ್ರತಿಭಟನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು, ಭಾರತ್ ಬಂದ್ ಗೆ ಕರೆ ನೀಡಿದ್ದ ಸಂಘಟನೆಗಳಿಗೆ ಹಿನ್ನಡೆಯುಂಟಾಗಿದೆ. ಇನ್ನು ಕರ್ನಾಟಕದಲ್ಲಿ ಬಂದ್ ಬಿಸಿ ಅಷ್ಟಾಗಿ ಮುಟ್ಟುವ ಸಾಧ್ಯತೆ ಕಡಿಮೆ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದ್ ಗೆ ತಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.

ಇದು ಕರ್ನಾಟಕದಲ್ಲಿ ಭಾರತ್ ಬಂದ್ ಬಿಸಿ ಅಷ್ಟಾಗಿ ತಟ್ಟುವುದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿದ್ದು ಹಲವು ವಿಶ್ವವಿದ್ಯಾಲಗಳು ಮುಂಜಾಗ್ರತಾ ಕ್ರಮವಾಗಿ ನಾಳೆ ನಡೆಯಬೇಕಿದ್ದ ಹಲವು ಪರೀಕ್ಷೆಗಳನ್ನು ಮುಂದೂಡಿವೆ. ಪ್ರಮುಖವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತನ್ನ ಪದವಿ, ಸ್ನಾತಕೋತ್ತರ ಹಾಗೂ ಎಂಫಿಲ್ ಪದವಿ ಪರೀಕ್ಷೆಗಳನ್ನು ಮುಂದೂಡಿದೆ.

ಇನ್ನು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಕೊಡಗು, ರಾಯಚೂರು, ಬೀದರ್, ಹಾವೇರಿ, ಬೆಳಗಾವಿ, ರಾಯಚೂರು, ಧಾರವಾಡ, ಶಿವಮೊಗ್ಗ, ಮೈಸೂರು, ಕಲಬುರುಗಿ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ನಡೆದ ಸತತ ಬಂದ್ ಗಳಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಹೀಗಾಗಿ ಮತ್ತೆ ಬಂದ್ ಮಾಡುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಹೋಟೆಲ್‌ಗ‌ಳು, ಬೆಂಗಳೂರು ಸಗಟು, ಆಹಾರ ಮತ್ತು ಧಾನ್ಯವರ್ತಕರ ಸಂಘ, ಬೆಂಗಳೂರು ಪ್ರವಾಸಿ ಟ್ಯಾಕ್ಸಿ ವಾಹನಗಳ ಮಾಲಿಕರ ಸಂಘ ಸೇರಿದಂತೆ ಮತ್ತಿತರರು ಆಕ್ರೋಶ ದಿವಸದಿಂದ ದೂರ ಉಳಿದಿವೆ. ಇನ್ನು ನಾಳೆ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಇರಲಿದ್ದು, ಒಂದು ವೇಳೆ ಅಹಿತಕರ ಘಟನೆ ನಡೆದರೆ, ಪ್ರಯಾಣಿಕರ ಹಿತದೃಷ್ಟಿಯಿಂದ ಭದ್ರತಾ ಕ್ರಮ ಕೈಗೊಂಡು ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು. ವಸಂತರಾವ್‌ ತಿಳಿಸಿದ್ದಾರೆ.0

Comments are closed.