ಕರ್ನಾಟಕ

ರೆಡ್ಡಿ ಮಗಳ ಮದುವೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರು

Pinterest LinkedIn Tumblr

yeddyurappaಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಹೊರಬಂದಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಣಿ ಅವರ ವೈಭವೋಪೇತ ಮದುವೆಯಲ್ಲಿ ಕರ್ನಾಟಕದ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದಾರೆ.

ಭ್ರಷ್ಟಾಚಾರ, ಕಪ್ಪು ಹಣ, ಕಾಳಧನಿಕರ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿರುವ ಈ ಸಂದರ್ಭದಲ್ಲಿ, ಕಳಂಕಿತ ರಾಜಕಾರಣಿ ಜನಾರ್ದನ ರೆಡ್ಡಿ ಪುತ್ರಿಯ ಮದುವೆಗೆ ಹೋದಲ್ಲಿ ಜನರ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದೇ ಕೇಂದ್ರದಲ್ಲಿರುವ ಕರ್ನಾಟಕದ ಸಚಿವರು ಹಾಗೂ ಪಕ್ಷದ ಕೇಂದ್ರದ ಮುಖಂಡರು ಬೆಂಗಳೂರಿನಲ್ಲಿ ನಡೆಯುವ ಮದುವೆಗೆ ಹಾಜರಾಗದಿರಲು ನಿರ್ಧರಿಸಿದ್ದರು.

ಜಾಮೀನು ಪಡೆದು ಕಾರಾಗೃಹದಿಂದ ಹೊರಬಂದಿರುವ ಜನಾರ್ದನರೆಡ್ಡಿ ವಿರುದ್ಧದ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ಹಾಗಿದ್ದರೂ ಮಗಳ ಮದುವೆಯ ಆಡಂಬರ ಕಂಡುಬರುತ್ತಿದೆ. ಅಂತೆಯೇ ಆ ಸಮಾರಂಭಕ್ಕೆ ಹೋಗುವುದು ಸೂಕ್ತವಲ್ಲ ಎಂಬ ನಿರ್ಧಾರ ಪಕ್ಷದ ಕೇಂದ್ರದ ಮುಖಂಡರು ಕೈಗೊಂಡಿದ್ದರು.

ಆದರೆ ವಿವಾಹ ವಿಷಯದಲ್ಲಿ ರಾಜಕೀಯ ಸಲ್ಲ ಎಂಬಂತೆ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ವಿಪಕ್ಷ ನೇತಾರ ಜಗದೀಶ್ ಶೆಟ್ಟರ್, ರೇಣುಕಾಚಾರ್ಯ ಮೊದಲಾದವರು ವಿವಾಹಕ್ಕೆ ಆಗಮಿಸಿ ವಧೂವರರನ್ನು ಆಶೀರ್ವದಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಿಣಿ ಮತ್ತು ರಾಜೀವ್ ರೆಡ್ಡಿ ವಿವಾಹ ನಡೆದಿದ್ದು ಹಲವಾರು ಗಣ್ಯರು, ಚಿತ್ರರಂಗದ ಪ್ರಮುಖರು ಭಾಗಿಯಾಗಿದ್ದಾರೆ.

Comments are closed.