ರಾಷ್ಟ್ರೀಯ

ಜೀವ ಬೆದರಿಕೆ ಹಾಕುತ್ತಿರುವವರ ಹೆಸರು ಬಹಿರಂಗಕ್ಕೆ ಆಗ್ರಹ

Pinterest LinkedIn Tumblr

ananda-sharmaನವದೆಹಲಿ, ನ.೧೬- ಹಳೆಯ ನೋಟುಗಳ ನಿಷೇಧ ಕ್ರಮವನ್ನು ಕಾಂಗ್ರೆಸ್ ನಾಯಕ ಆನಂದ್ ಶರ್ಮ ಇಂದು ರಾಜ್ಯಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಜೀವ ಬೆದರಿಕೆ ಭೀತಿ ಇದೆ ಎಂಬ ಪ್ರಧಾನಿ ಹೇಳಿಕೆ ಬಗ್ಗೆ ಪ್ರಶ್ನಾರ್ಥಕ ರೂಪದಲ್ಲಿ ಪ್ರತಿಕ್ರಿಯಿಸಿದರು.

ನಿಮ್ಮನ್ನು ಹೆದರಿಸುತ್ತಿರುವವರು ಯಾರು? ಜೀವ ಬೆದರಿಕೆ ಒಡ್ಡುತ್ತಿರುವವರು ಯಾರು ಎಂದು ಇಂದು ನೀವು ಸಂಸತ್ತಿನಲ್ಲಿ ಹೇಳಬೇಕು. ಇದನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಪ್ರಧಾನಿ ಜೀವಕ್ಕೆ ಬೆದರಿಕೆ ಇದ್ದಲ್ಲಿ ಇಡೀ ಸದನವೇ ಅಂಥ ಕ್ರಮವನ್ನು ಖಂಡಿಸುವುದು ಎಂದೂ ಅವರು ಹೇಳಿದರು.

ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಅಪಮೌಲ್ಯೀಕರಣ ಹಾಗೂ ಅಂಥ ಕ್ರಮದ ಫಲವಾಗಿ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ವಿಷಯದ ಚರ್ಚೆಯನ್ನು ಆರಂಭಿಸಿ ಅವರು ಮಾತನಾಡುತ್ತಿದ್ದರು.

ಗೋವಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನ ಮಂತ್ರಿಗಳು, `ಕೆಲವೊಂದು ಶಕ್ತಿಗಳು ನನಗೆ ವಿರುದ್ಧವಾಗಿರುವುದು ನನಗೆ ಗೊತ್ತಿದೆ. ಅವರು ನನ್ನನ್ನು ಬದುಕುವುದಕ್ಕೂ ಬಿಡಲಿಕ್ಕಿಲ್ಲ…ಏಕೆಂದರೆ ಕಳೆದ 70 ವರ್ಷಗಳಿಂದ ಅವರು ಲೂಟಿ ಮಾಡಿಕೊಂಡು ಬಂದಿರುವುದು ಈಗ ಉಳಿಯಲಿಕ್ಕಿಲ್ಲ. ಆದರೆ ನಾನು ಅದಕ್ಕೆಲ್ಲಾ ಸಿದ್ಧವಾಗಿಯೆ ಇದ್ದೇನೆ` ಎಂಬುದಾಗಿ ಆರೋಪಿಸಿದ್ದರು.

ಪ್ರಧಾನ ಮಂತ್ರಿಗಳ ಈ ಹೇಳಿಕೆ ಪ್ರಸ್ತಾಪಿಸಿದ ಆನಂದ್ ಶರ್ಮ, `ನಾವು ಪ್ರಧಾನ ಮಂತ್ರಿಗಳ ಸುದೀರ್ಘ ಜೀವನವನ್ನು ಆಶಿಸುತ್ತೇವೆ. ಪ್ರಾಣ ಭೀತಿ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿ` ಎಂದು ಕೋರಿದರು

ಇದ್ದಕ್ಕಿದಂತೆಯೆ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಅಪಮೌಲ್ಯೀಕರಣದಿಂದ ಸರ್ಕಾರ ಹಣಕಾಸಿನ ಅರಾಜಕತೆಗೆ ದಾರಿ ಮಾಡಿಕೊಟ್ಟಿದೆ. ಜನರು ಲಕ್ಷಾಂತರ ಸಂಖ್ಯೆಯಲ್ಲಿ ಬ್ಯಾಂಕುಗಳು ಹಾಗೂ ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ ಎಂದವರು ಆರೋಪಿಸಿದರು.

ಇದಕ್ಕಾಗಿ ಪ್ರಧಾನ ಮಂತ್ರಿಗಳ ಧೋರಣೆಯನ್ನು ಖಂಡಿಸುತ್ತೇನೆ. ಬಡಜನರು ಕಳೆದ 5-6 ದಿನಗಳಿಂದ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಪ್ರಧಾನಿ ಈ ಬಡಜನರ ಕ್ಷಮೆಯಾಚಿಸಬೇಕು…. ಇದೆಂಥ ಕಾನೂನು? ಇದೇನು ಕಪ್ಪು ಹಣದ ವಿರುದ್ಧ ಸಮರ ಸಾರುವ ವೈಖರಿಯೇ? ನೀವು ದೇಶದ ಮೇಲೆ ಹಣಕಾಸಿನ ಅರಾಜಕತೆ ಪರಿಸ್ಥಿತಿಯನ್ನು ಎಳೆದು ತಂದಿದ್ದೀರಿ ಎಂದು ಆನಂದ್ ಶರ್ಮಾ ಹರಿಹಾಯ್ದರು.

ಲೋಕಸಭೆಯಲ್ಲಿ ಕಲಾಪ ಆರಂಭ ಆಗುವ ಮೊದಲು ಪ್ರಧಾನ ಮಂತ್ರಿಗಳು ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಹಾಗೂ ರಾಂ ವಿಲಾಸ್ ಪಾಸ್ವಾನ್ ಮತ್ತು ಅಶೋಕ ಗಜಪತಿ ರಾಜು ಅವರನ್ನು ಭೇಟಿ ಮಾಡಿದರು. ಅನಂತರ ಸಚಿವರಾದ ರಾಜ್‌ನಾಥ್‌ಸಿಂಗ್ ಹಾಗೂ ಅನಂತಕುಮಾರ್ ಅವರ ಜತೆಗೂಡಿ ಪ್ರತಿಪಕ್ಷ ಸದಸ್ಯರ ಸಾಲಿನತ್ತ ಸಾಗಿದರು. ಸೋನಿಯಾಗಾಂಧಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರ ಕುಶಲ ವಿಚಾರಿಸಿದರು. ಕೆಲ ಕಾಲ ಮಲ್ಲಿಕಾರ್ಜನ ಖರ್ಗೆ ಅವರೊಂದಿಗೆ ಮಾತನಾಡಿದರು.

ಹಾಲಿ ಸದಸ್ಯೆ ತೃಣಮೂಲ ಕಾಂಗ್ರೆಸ್‌ನ ರೇಣುಕಾಶರ್ಮಾ ಅವರೂ ಸೇರಿದಂತೆ ಅಗಲಿದ ಒಂಭತ್ತು ನಾಯಕರಿಗೆ ಸಂತಾಪ ಸೂಚಿಸಿದ ನಂತರ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದಕ್ಕೆ ಹಾಕಲಾಯಿತು.

ನೋಟು ನಿಷೇಧ ಕ್ರಮದಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ವಿವರಿಸಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ತೆರಳಲಿರುವ ಪ್ರತಿಪಕ್ಷ ನಿಯೋಗದಲ್ಲಿ ಪಾಲ್ಗೊಳ್ಳದಿರಲು ಒಡಿಶಾದ ಬಿಜು ಜನತಾ ದಳ ತೀರ್ಮಾನಿಸಿದೆ.

ಈ ಮಧ್ಯೆ ತೃಣಮೂಲ ಕಾಂಗ್ರೆಸ್ ಸದಸ್ಯರು ಸಂಸತ್ ಆವರಣದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಪ್ರತಿಭಟನಾ ಧರಣಿ ನಡೆಸಿದರು.

Comments are closed.