ಕರ್ನಾಟಕ

ನೀರಿನ ಸಮಸ್ಯೆ ನಿವಾರಣೆಗೆ ಸಿದ್ಧತೆ: ಈಶ್ವರ ಬಿ. ಖಂಡ್ರೆ

Pinterest LinkedIn Tumblr

cold_water_picwaterಬೆಂಗಳೂರು, ಅ. ೧೬- ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ರಾಜ್ಯದ ಬಹುತೇಕ ಪ್ರದೇಶಗಳು ಬರಪೀಡಿತವಾಗಿರುವುದರಿಂದ ಮುಂದೆ ಎದುರಾಗುವ ಕುಡಿಯುವ ನೀರಿನ ಕೊರತೆಯನ್ನು ಮನಗಂಡು ಕುಡಿಯುವ ನೀರಿನ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ತುರ್ತು ಕಾಮಗಾರಿಗಳಿಗೆ ಬರುವ ಜೂನ್‌ವರೆಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.ರಾಜ್ಯ ಸರ್ಕಾರದ ಕುಡಿಯುವ ನೀರಿನ ಯೋಜನೆ, ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಯೋಜನೆ ಸೇರಿದಂತೆ ಎಲ್ಲಾ ಕುಡಿಯುವ ನೀರಿನ ಯೋಜನೆಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕುಡಿಯುವ ನೀರಿನ ಕೊರತೆ ಇರುವ ಕಡೆ ಬೋರ್‌ವೆಲ್‌ಗಳನ್ನು ಕೊರೆಯಲು, ಪೈಪ್‌ಲೈನ್ ಕಾಮಗಾರಿಗಳನ್ನು ನಡೆಸಲು ಸೂಚಿಸಲಾಗಿದೆ. ಖಾಸಗಿ ಬೋರ್‌ವೆಲ್‌ಗಳಲ್ಲಿ ನೀರು ಲಭ್ಯವಿದ್ದರೆ ಅದನ್ನು ವಶಕ್ಕೆ ಪಡೆದು ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ಕ್ರಮ ಕೈಗೊಂಡಿರುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದರು.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳು ಜಾರಿಯಾಗಲು ಇಂಜಿನಿಯರ್‌ಗಳ ಕೊರತೆ ಇರುವುದರಿಂದ ಹೊಸ ಇಂಜಿಯರಿಂಗ್ ಹುದ್ದೆಗಳು ಭರ್ತಿಯಾಗುವವರೆಗೂ ನಿವೃತ್ತ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯೂ ಸೇರಿದಂತೆ ಕಾಮಗಾರಿಗಳ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ಪರಿಷ್ಕರಿಸಲಾಗಿದ್ದು, ಹೊಸ ಆದೇಶದಂತೆ ಪಟ್ಟಣ ಪಂಚಾಯ್ತಿಗಳಿಗೆ ಈ ಹಿಂದೆ ಇದ್ದ 5 ಲಕ್ಷ ರೂ. ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆಯನ್ನು 15 ಲಕ್ಷ ರೂ.ಗಳಿಗೆ, ಪುರಸಭೆಗಳಿಗೆ 15 ಲಕ್ಷದಿಂದ 30 ಲಕ್ಷ ರೂ.ಗಳವರೆಗೆ, ಗ್ರೇಡ್ 1 ನಗರಸಭೆಗಳಿಗೆ 30 ಲಕ್ಷದಿಂದ 1 ಕೋಟಿ ವರೆಗೆ, ಗ್ರೇಡ್ 2 ನಗರಸಭೆಗಳಿಗೆ 20 ಲಕ್ಷದಿಂದ 50 ಲಕ್ಷದವರೆಗೆ, ಮಹಾನಗರ ಪಾಲಿಕೆಗೆ 1 ಕೋಟಿ ನಿಂದ 2 ಕೋಟಿ ರೂ.ಗಳವರೆಗೆ ಏರಿಕೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳಿಗೆ 5 ಕೋಟಿ ರೂ.ಗಳವರೆಗೆ ಆಡಳಿತಾತ್ಮಕ ಅನುಮೋದನೆ ಅಧಿಕಾರ, ಪೌರಾಡಳಿತ ನಿರ್ದೇಶಕರಿಗೆ 10 ಕೋಟಿ ರೂ. ವರೆಗಿನ ಆಡಳಿತಾತ್ಮಕ ಅನುಮೋದನೆಯ ಅಧಿಕಾರ ನೀಡಲಾಗಿದೆ. 10 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ಸಚಿವ ಸಂಪುಟದ ಅನುಮೋದನೆ ಪಡೆಯಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Comments are closed.