ಕರ್ನಾಟಕ

ಬೇಸಿಗೆಗೂ ಮುನ್ನವೇ ವಿದ್ಯುತ್ ಅಭಾವ

Pinterest LinkedIn Tumblr

lightಬೆಂಗಳೂರು, ನ.೧೬- ರಾಜ್ಯದಲ್ಲಿ ಈ ವರ್ಷ ನಿರೀಕ್ಷಿತ ಮಳೆ ಆಗದ ಹಿನ್ನೆಲೆಯಲ್ಲಿ ಬೇಸಿಗೆಗೂ ಮುನ್ನವೇ ವಿದ್ಯುತ್ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಚಳಿಗಾಲದ ಸುಳಿವಿಲ್ಲ. ಎಲ್ಲಾ ಕಡೆಗಳಲ್ಲಿ ಈಗಲೇ ಬೇಸಿಗೆ ಆರಂಭಗೊಂಡಿದೆ. ನವೆಂಬರ್ ತಿಂಗಳಲ್ಲೇ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದ್ದು, ಇದೇ ರೀತಿ ಮುಂದುವರಿದರೆ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದೆ.
ವಿವಿಧ ಸ್ಟೇಷನ್‌ಗಳಿಂದ ರಾಜ್ಯ ಸುಮಾರು ೨೦೦ ಮಿಲಿಯನ್ ಯುನಿಟ್ಸ್ ವಿದ್ಯುತ್ ಒದಗಿಸುತ್ತಿದೆ. ಇದರಲ್ಲಿ ಜಲವಿದ್ಯುತ್ ಸ್ಥಾವರದಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೆಲವೊಮ್ಮೆ ೨೧೦ ಮಿಲಿಯನ್ ಯುನಿಟ್ ಬೇಡಿಕೆ ಬರಲಿದ್ದು ಅಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ೭ ವರ್ಷಗಳಿಂದ ೫೦,೧೪೮ ಮಿಲಿಯನ್ ಯುನಿಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ಸುಮಾರು ೨೪,೬೯೪ ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ಇಡೀ ಕರ್ನಾಟಕದಲ್ಲಿ ಪ್ರತಿದಿನ ೧೯೦ ಮಿಲಿಯನ್ ಯುನಿಟ್ ವಿದ್ಯುತ್ ಬಳಸಲಾಗುತ್ತಿದೆ. ಪೀಕ್ ಅವರ್ಸ್‌ನಲ್ಲಿ ೯,೮೦೦ ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಬೇಸಿಗೆಯಲ್ಲಿ ಪ್ರತಿದಿನ ಸರಾಸರಿ ೨೦೦ ಮಿಲಿಯನ್ ಯುನಿಟ್ ವಿದ್ಯುತ್ ಬಳಕೆಯಾಗುತ್ತದೆ.
ಮಳೆ ಕೊರತೆಯಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ನೀರಿಗಾಗಿ ರೈತರು ಪಂಪ್ ಸೆಟ್ ಬಳಕೆ ಹೆಚ್ಚು ಮಾಡುತ್ತಿರುವುದು, ತಾಪಮಾನ ಏರಿಕೆಯಾಗಿರುವ ಕಾರಣ ಫ್ಯಾನ್, ಹವಾನಿಯಂತ್ರಕಗಳನ್ನು ಬಳಸುತ್ತಿರುವುದು ವಿದ್ಯುತ್ ಬಳಕೆಯ ಪ್ರಮಾಣದಲ್ಲಿ ಏರಿಕೆಯಾಗುವುದಕ್ಕೆ ಕಾರಣವಾಗಿದೆ.
ಮಳೆ ಕೊರತೆಯಿಂದಾಗಿ ಬೇಸಿಗೆ ಕಾಲದಲ್ಲಿ ಮತ್ತಷ್ಟು ವಿದ್ಯುತ್ ಅಭಾವ ತಲೆದೋರಲಿದ್ದು, ಪವರ್ ಕಟ್ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ವಿದ್ಯುತ್ ಬಳಕೆ ಮಾಡುವಲ್ಲಿ ಸ್ವಲ್ಪ ಮಟ್ಟಿಗಾದರೂ ಶಿಸ್ತು ವಹಿಸಿ ವಿದ್ಯುತ್ ಅನ್ನು ರಕ್ಷಿಸಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.