ಬೆಂಗಳೂರು(ನ.05): ಯುವತಿಯರ ಮೂಲಕ ವ್ಯಾಪಾರಿಗಳನ್ನು ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಸಿದ್ದಾರೆ.
ಚಿಕ್ಕಬಾಣಸವಾಡಿಯ ಮಹಮದ್ ಸೌದ್(29), ಮಹಮದ್ ಶಬೀರ್(40) ಹಾಗೂ ಎಂ. ರಶೀದ್(30) ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಕೆ.ಜಿ.ಹಳ್ಳಿಯ ನಿವಾಸಿ ಫೈರೋಜ್ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಅ.28ರಂದು ವ್ಯವಹಾರದ ಹಿನ್ನೆಲೆಯಲ್ಲಿ ಕೇರಳ ಮೂಲದ ಐವರು ವ್ಯಾಪಾರಿಗಳು ನಗರಕ್ಕೆ ಬಂದಿದ್ದರು. ಶೇಷಾದ್ರಿಪುರದ ಲಾಡ್ಜ್`ವೊಂದರಲ್ಲಿ ತಂಗಿದ್ದ ಅವರು, ಆ ರಾತ್ರಿ ತಮ್ಮೊಂದಿಗೆ ರಾತ್ರಿ ಕಳೆಯಲು ಯುವತಿಯರನ್ನು ಕರೆಸುವಂತೆ ಪರಿಚಿತ ವ್ಯಕ್ತಿಯೊಬ್ಬರಿಗೆ ಕೇಳಿಕೊಂಡಿದ್ದರು. ಹೀಗಾಗಿ ಆ ವ್ಯಕ್ತಿ ಐದು ಮಂದಿ ವ್ಯಾಪಾರಿಗಳನ್ನು ಹೆಣ್ಣೂರು ಸಮೀಪದ ಮನೆಯೊಂದಕ್ಕೆ ಕರೆದೊಯ್ದಿದ್ದರು. ಬಳಿಕ ಯುವತಿಯರನ್ನು ಕಳುಹಿಸಿ ವ್ಯಾಪಾರಿಗಳಿಂದ ಹಣ ಪಡೆದು ಅಲ್ಲಿಂದ ಹೋಗಿದ್ದಾರೆ. ಮನೆಯೊಳಗೆ ಹೋದ ಯುವತಿಯರು ಕೆಲ ಸಮಯದ ಬಳಿಕ ಆರೋಪಿ ರಶೀದ್`ಗೆ ಸಂದೇಶ ಕಳುಹಿಸಿ, ಐವರು ವ್ಯಾಪಾರಿಗಳು ತಮ್ಮ ಜತೆ ಬಂದಿದ್ದಾರೆ ಎಂದು ವಿಷಯ ತಿಳಿಸಿದ್ದಾರೆ.
ಆ ಕೂಡಲೇ ತನ್ನ ಸಹಚರರಾದ ಮಹಮದ್ ಸೌದ್, ಮಹಮದ್ ಶಬೀರ್ ಜತೆ ಮನೆಯೊಳಗೆ ನುಗ್ಗಿದ ರಶೀದ್, ವ್ಯಾಪಾರಿಗಳನ್ನು ಹೆದರಿಸಿ 60 ಗ್ರಾಂ ಚಿನ್ನದ ಸರ, 70 ಸಾವಿರ ನಗದು ಹಾಗೂ ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ. ಈ ವಿಚಾರವನ್ನು ಹೊರಗಡೆ ತಿಳಿಸಿದರೆ, ಅನೈತಿಕ ಸಂಬಂಧದ ಬಗ್ಗೆ ನಿಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವುದಾಗಿ ಬೆದರಿಕೆಯೊಡ್ಡಿದ್ದರು. ಆದರೆ, ಈ ಐದು ಮಂದಿ ಪೈಕಿ ಒಬ್ಬ ವ್ಯಾಪಾರಿ ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.