ಕರ್ನಾಟಕ

ಸಾವಿರಾರು ಕೋಟಿ ಬೆಲೆಬಾಳುವ 175 ಎಕರೆ ಭೂಮಿ ವಶ

Pinterest LinkedIn Tumblr

landಬೆಂಗಳೂರು, ಅ. ೨೮- ಸರ್ಕಾರಿ ಭೂಮಿ ಒತ್ತುವರಿ ಕಾರ್ಯಾಚರಣೆಯನ್ನು ಮುಂದುವರೆಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ಇಂದು ಕಾಡುಗೋಡಿಯ ದಿನ್ನೂರು ಬಳಿ ಒತ್ತುವರಿಯಾಗಿದ್ದ ಸಾವಿರಾರು ಕೋಟಿ ರೂ. ಬೆಲೆಬಾಳುವ 175 ಎಕರೆ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ನಗರದ ಹೊರವಲಯದಲ್ಲಿರುವ ಕಾಡುಗೋಡಿ ದಿನ್ನೂರು ಪ್ಲಾಂಟೇಷನ್‌ನ ಜಮೀನಿನ ಸರ್ವೆ ನಂ. 1ರಲ್ಲಿ ಕಾಡುಗೋಡಿ ವ್ಯವಸಾಯ ಸಹಕಾರ ಸಂಘದವರು ಸುಮಾರು 175 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಈ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ತಾಣವನ್ನು ನಿರ್ಮಿಸಿದ್ದರು.
ಈ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ರಾಜ್ಯ ಹೈಕೋರ್ಟ್ ಈ ಜಮೀನು ಸರ್ಕಾರಿ ಜಮೀನು ಎಂದು ತೀರ್ಪು ನೀಡಿತ್ತು. ರಾಜ್ಯ ಹೈಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾ‌ಡಳಿತದ ಸೂಚನೆಯಂತೆ ಕೃಷ್ಣರಾಜಪುರ ತಹಸೀಲ್ದಾರ್ ತೇಜಸ್ ಅವರು ಇಂದು ಬೆಳಿಗ್ಗೆ ಪೊಲೀಸರ ನೆರವಿನಿಂದ ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿ, ಕಾ‌ಡುಗೋಡಿ ವ್ಯವಸಾಯ ಸಹಕಾರ ಸಂಘ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ಪಡೆದುಕೊಂಡರು.
ಇಂದು ಜಿಲ್ಲಾಡಳಿತ ಮರಳಿ ವಶಕ್ಕೆ ಪಡೆದುಕೊಂಡಿರುವ ಸುಮಾರು 175 ಎಕರೆ ಜಮೀನು ಈಗಿನ ಮಾರುಕಟ್ಟೆ ಬೆಲೆಯಲ್ಲಿ ಸಾವಿರಾರು ಕೋಟಿ ರೂ.ಗಳು ಆಗುತ್ತದೆ. ನಗರ ಜಿಲ್ಲಾಡಳಿತ ಇತ್ತೀಚಿನ ದಿನಗಳಲ್ಲಿ ನಡೆಸಿರುವ ದೊಡ್ಡ ಒತ್ತುವರಿ ತೆರವು ಕಾರ್ಯಾಚರಣೆ ಇದಾಗಿದೆ. ಒಂದೇ ಜಾಗದಲ್ಲಿ ಸುಮಾರು 175 ಎಕರೆ ಜಮೀನನ್ನು ತೆರವುಗೊಳಿಸಿ ವಶಪಡಿಸಿಕೊಂಡಿರುವುದು ನಿಜಕ್ಕೂ ದಾಖಲೆ ಎನ್ನಬಹುದು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವಿರಾರು ಕೋಟಿ ರೂ. ಬೆಲೆಬಾಳುವ ಜಮೀನು ಸರ್ಕಾರದ ಕೈತಪ್ಪಿ, ಒತ್ತುವರಿಯಾದ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಸಾರ್ವಜನಿಕರು ಮಾಡಿದ್ದಾರೆ.
ಮಸೀದಿ ತೆರವು
ಒತ್ತುವರಿ ಭೂಮಿಯಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿ, ಮಸೀದಿ ತೆರವುಗೊಳಿಸಲು ಶುಕ್ರವಾರವಾದ ಕಾರಣ ಅಧಿಕಾರಿಗಳು ಒಂದು ದಿನ ತಡ ಮಾಡಿದ್ದಾರೆ. ಇಂದು ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಅದನ್ನು ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಗುಂಪುಗೂಡಿದ್ದರು.
3 ಕೋಟಿ ರೂ. ಮೌಲ್ಯದ ನಿವೇಶನ ವಶ
ಶಂಕರಮಠ ವಾರ್ಡ್‌ನ ಕಿರ್ಲೋಸ್ಕರ್ ಗೃಹ ನಿರ್ಮಾಣ ಬಡಾವಣೆಯಲ್ಲಿನ ಸುಮಾರು 3 ಕೋಟಿ ರೂ. ಮೌಲ್ಯದ ವಿವಾದಿತ 40×60 ಅಳತೆಯ ನಿವೇಶನವನ್ನು ಬಿಬಿಎಂಪಿ ಇಂದು ತನ್ನ ವಶಕ್ಕೆ ತೆಗೆದುಕೊಂಡಿದೆ.
ಬಡಾವಣೆಯಲ್ಲಿರುವ ನಿವೇಶನ ಸಂಖ್ಯೆ 45 ಮತ್ತು 46 ರ ಮಧ್ಯೆ ಬರುವ 40×60 ಅಡಿಗಳ ನಿವೇಶನವನ್ನು ಕೆಲವರು ಬಿಡಿಎನಲ್ಲಿ ನಕಾಶೆ ಮಾಡಿಸಿ ಕಬಳಿಸುವ ಪ್ರಯತ್ನ ನಡೆಸಿದ್ದರು.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಎಂ. ಶಿವರಾಜ್ ಅವರು ಶಂಕರಮಠದಲ್ಲಿರುವ ಈ ನಿವೇಶನವನ್ನು ಪತ್ತೆಹಚ್ಚಿ ಬಿಬಿಎಂಪಿ ವಶಕ್ಕೆ ಪಡೆದುಕೊಳ್ಳುವಂತೆ ಆಯುಕ್ತರಿಗೆ ಶಿಫಾರಸು ಮಾಡಿದ್ದರು.
ಆಯುಕ್ತ ಮಂಜುನಾಥ್‌ಪ್ರಸಾದ್ ಅವರ ಆದೇಶದಂತೆ ಇಂದು ಸ್ಥಳಕ್ಕೆ ತೆರಳಿದ ಜಂಟಿ ಆಯುಕ್ತ ಪಿಳ್ಳಂಗಪ್ಪ ಮತ್ತು ಎಂಜಿನಿಯರ್‌ಗಳು ನಿವೇಶನವನ್ನು ವಶಕ್ಕೆ ಪಡೆದುಕೊಂಡು ಬಿಬಿಎಂಪಿ ಸ್ವತ್ತು ಎಂದು ನಾಮಫಲಕ ಅಳವಡಿಸಿದರು.
ಕಿರ್ಲೋಸ್ಕರ್ ಗೃಹ ನಿರ್ಮಾಣ ಬಡಾವಣೆ ರಚನೆ ವೇಳೆ 40×60 ಅಡಿಗಳ ನಿವೇಶನ ಯಾರಿಗೂ ಸೇರಿರಲಿಲ್ಲ. ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿ ಎಂಪ್ಲಾಯಿ ಸೊಸೈಟಿ ಬಿಡಿಎನಿಂದ ನಿವೇಶನ ಪಡೆದು ಬಡಾವಣೆ ರಚಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಆದರೆ, 40×60 ಅಡಿಗಳ ನಿವೇಶನವನ್ನು ಮಾತ್ರ ಯಾರಿಗೂ ಕ್ರಯ ಮಾಡಿರಲಿಲ್ಲ. ಬಡಾವಣೆ ಅಭಿವೃದ್ಧಿಗೊಂಡ ನಂತರ ಬಿಡಿಎ, ಬಿಬಿಎಂಪಿಗೆ ಬಡಾವಣೆಯನ್ನು ಹಸ್ತಾಂತರಿಸಿತ್ತು. ಆದರೆ, ಈ ನಿವೇಶನವನ್ನು ಪಾಲಿಕೆ ತನ್ನ ವಶಕ್ಕೆ ಪಡೆದುಕೊಂಡಿರಲಿಲ್ಲ.
40×60 ಅಡಿ ಅಳತೆಯ ಈ ನಿವೇಶನವನ್ನು ನಾಗರಿಕ ಸೌಲಭ್ಯಕ್ಕೆ ಬಳಸಬೇಕು ಎಂದು ಇಲ್ಲಿನ ಗೃಹ ನಿರ್ಮಾಣ ಬಡಾವಣೆಯ ನಾಗರಿಕರು ಮನವಿ ಮಾಡಿದ್ದಾರೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ. ಶಿವರಾಜ್ ತಿಳಿಸಿದ್ದಾರೆ.
ಸಧ್ಯದಲ್ಲೇ ನಿವೇಶನಕ್ಕೆ ತಂತಿಬೇಲಿ ಅಳವಡಿಸಲಾಗುವುದು. ನಂತರ ಅದನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Comments are closed.